ADVERTISEMENT

ಸ್ವದೇಶಿ ಚಿಂತನೆ ಆಚರಣೆಯಲ್ಲಿ ಬರಲಿ: ಮಧುರಾ ಶಿವಾನಂದ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 6:19 IST
Last Updated 10 ಅಕ್ಟೋಬರ್ 2021, 6:19 IST
ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಉದ್ಘಾಟಿಸಿದರು.
ಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಉದ್ಘಾಟಿಸಿದರು.   

ಸಾಗರ: ಗಾಂಧೀಜಿ ಪ್ರತಿಪಾದಿಸಿದ ಸ್ವದೇಶಿ ಚಿಂತನೆಯನ್ನು ಕೇವಲ ಬರಹ ಮತ್ತು ಭಾಷಣಗಳಲ್ಲಿ ಪ್ರತಿಪಾದಿಸುವುದ
ರಿಂದ ಯಾವುದೇ ಪ್ರಯೋಜನವಿಲ್ಲ.ಆ ಚಿಂತನೆ ಆಚರಣೆಯಲ್ಲಿ ಜಾರಿಗೆ ಬರಬೇಕು ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶನಿವಾರ ಏರ್ಪಡಿಸಿದ್ದ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರು ಆಧುನಿಕತೆಗೆ ಮಾರುಹೋಗಿದ್ದು, ಸ್ವದೇಶಿ ಚಿಂತನೆಗಳಿಂದ ದೂರವಾಗಿದ್ದಾರೆ. ಸ್ವದೇಶಿ ಚಿಂತನೆಯ ಮಹತ್ವವನ್ನು ಅವರಿಗೆ ನಾವು ತಿಳಿಸುವ ಅಗತ್ಯವಿದೆ. ಸ್ವದೇಶಿ ವಸ್ತುಗಳ ಬಳಕೆಯಿಂದ ನಮ್ಮ ನಡುವಿನ ದುಡಿಯುವ ಕೈಗಳಿಗೆ ಕೆಲಸ ದೊರಕುತ್ತದೆ ಎಂಬ ಜಾಗೃತಿ ನಮ್ಮಲ್ಲಿ ಮೂಡಬೇಕಿದೆ’ ಎಂದು ಹೇಳಿದರು.

ADVERTISEMENT

‘ದುಶ್ಚಟಗಳಿಂದ ಮನುಷ್ಯ ದೂರವಿದ್ದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಕುಡಿತದ ಚಟಕ್ಕೆ ಒಳಗಾದವರನ್ನು ಮನವೊಲಿಸಿ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಗಾಂಧಿ ಚಿಂತನೆ ಕುರಿತು ಉಪನ್ಯಾಸ ನೀಡಿದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಸಣ್ಣಹನುಮಪ್ಪ, ‘ಗಾಂಧೀಜಿಗೆ ಅವರ ಚಿಂತನೆ ಹಾಗೂ ಬದುಕು ಬೇರೆ ಬೇರೆ ಆಗಿರಲಿಲ್ಲ. ಜೀವನವೇ ಅವರಿಗೆ ಒಂದು ಪ್ರಯೋಗ ಶಾಲೆಯಾಗಿತ್ತು. ಗಾಂಧೀಜಿ ಸ್ನೇಹ, ಸೌಹಾರ್ದ, ಪ್ರೀತಿ, ಸಾಮರಸ್ಯದ ಸಂಕೇತ’ ಎಂದು ಬಣ್ಣಿಸಿದರು.

ಶ್ರಮ ಸಂಸ್ಕೃತಿಯ ಜನರ ಬದುಕು ಉನ್ನತ ಮಟ್ಟಕ್ಕೆ ಏರಬೇಕು ಎಂಬುದು ಗಾಂಧೀಜಿ ಕಂಡ ಕನಸಾಗಿತ್ತು. ಭಾರತದ ಆತ್ಮ ಇರುವುದೇ ಹಳ್ಳಿಗಳಲ್ಲಿ ಎಂದು ಅವರು ಹೇಳುತ್ತಿದ್ದರು ಎಂಬುದನ್ನು ನೆನಪಿಸಿದರು.

‘ಗಾಂಧೀಜಿ ಪಾಲಿಗೆ ಚರಕ ಎಂಬುದು ನಿಂತ ನೀರು ಆಗಿರಲಿಲ್ಲ. ಅದೊಂದು ಚಲನಶೀಲತೆಯ ಸಂಕೇತವಾಗಿತ್ತು. ಚರಕದ ಮೂಲಕ ಸ್ವಾವಲಂಬಿ ಬದುಕು ನಮ್ಮದಾಗಬೇಕು ಎಂದು ಚಿಂತಿಸಿದ್ದ ಗಾಂಧೀಜಿ ಬಡವರ ಉದ್ಧಾರಕ್ಕೆ ತಮ್ಮ ಬದುಕನ್ನೇ ತ್ಯಾಗ ಮಾಡಿದ ಮಹಾತ್ಮ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಜನಜಾಗೃತಿ ವೇದಿಕೆಯ ದೇವರಾಜ ಕುರುವರಿ, ಕಸ್ತೂರಿ ಸಾಗರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತಾ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.