ADVERTISEMENT

ಪ್ರಭುತ್ವ ಎಚ್ಚರಿಸಲು ಸಾಹಿತ್ಯ ಬಳಕೆಯಾಗಲಿ: ಡಾ.ಮೋಹನ್ ಚಂದ್ರಗುತ್ತಿ

ಪುಸ್ತಕ ಬಿಡುಗಡೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 10:37 IST
Last Updated 6 ಜನವರಿ 2020, 10:37 IST
ಶಿಕಾರಿಪುರದಲ್ಲಿ ಭಾನುವಾರ ತಾಳಗುಂದ ದಿ.ರಾಮಪ್ಪ ಬಿ. ಸದ್ಭಾವನಾ ವೇದಿಕೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ "ವಚನ ಪ್ರಣವಜ್ಯೋತಿ–2' ಹಾಗೂ "ಡಾಕೇಶನ ತ್ರಿಪದಿಕಾ' ಪುಸ್ತಕ ಬಿಡುಗಡೆಗೊಳಿಸಲಾಯಿತು
ಶಿಕಾರಿಪುರದಲ್ಲಿ ಭಾನುವಾರ ತಾಳಗುಂದ ದಿ.ರಾಮಪ್ಪ ಬಿ. ಸದ್ಭಾವನಾ ವೇದಿಕೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ "ವಚನ ಪ್ರಣವಜ್ಯೋತಿ–2' ಹಾಗೂ "ಡಾಕೇಶನ ತ್ರಿಪದಿಕಾ' ಪುಸ್ತಕ ಬಿಡುಗಡೆಗೊಳಿಸಲಾಯಿತು   

ಶಿಕಾರಿಪುರ: ಜನಪ್ರತಿನಿಧಿಗಳನ್ನು ಓಲೈಸಲು ಸಾಹಿತ್ಯ ಬಳಕೆ ಮಾಡಿಕೊಳ್ಳದೇ, ಪ್ರಭುತ್ವವನ್ನು ಎಚ್ಚರಿಸಲು ಸಾಹಿತ್ಯವನ್ನು ಬಳಸಿಕೊಳ್ಳಬೇಕು ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ತಾಳಗುಂದ ದಿ.ರಾಮಪ್ಪ ಬಿ. ಸದ್ಭಾವನಾ ವೇದಿಕೆ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸಮಾನತೆ ವಿರುದ್ಧ ಸಾಹಿತ್ಯ ಪರಂಪರೆ ಪ್ರತಿಭಟಿಸುತ್ತದೆ. ಜ್ಞಾನದ ಮಾರ್ಗ ಹಾಗೂ ಪ್ರತಿಭಟನೆಯ ಮಾರ್ಗವಾಗಿ ಸಾಹಿತ್ಯ ಕಾರ್ಯ ನಿರ್ವಹಿಸುತ್ತದೆ. ಆದರೆ ಪ್ರಸ್ತುತ ದೇಶದಲ್ಲಿ ನಡೆಯುವ ಅನ್ಯಾಯ ಹಾಗೂ ದೌರ್ಜನ್ಯಗಳ ಕುರಿತು ಬರೆಯುವುದು ಹಾಗೂ ಭಾಷಣ ಮಾಡುವುದು ಅಪಾಯಕಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಬಡವರ ಕಣ್ಣೀರು ಒರೆಸಲು ಸಾಹಿತ್ಯ ಬಳಕೆಯಾಗಬೇಕು. ಎಚ್ಚರಿಕೆಯಿಂದ ಉತ್ತಮ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಲೇಖಕರ ಮೇಲಿದೆ ಎಂದ ಅವರು, ‘ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಡಾಕೇಶ್ ಬರೆದ ‘ವಚನ ಪ್ರಣವ ಜ್ಯೋತಿ–2’ ಹಾಗೂ ‘ಡಾಕೇಶನ ತ್ರಿಪದಿಕಾ’ ಕೃತಿಗಳಲ್ಲಿ ಸೃಜನಶೀಲತೆ ಎದ್ದು ಕಾಣುತ್ತದೆ. ಆತ್ಮವಿಮರ್ಶೆಗೆ ಕೃತಿಗಳು ಒಳಪಡಿಸುತ್ತವೆ. ಈ ಕೃತಿಗಳು ಸಾರ್ವಜನಿಕರನ್ನು ತಲುಪುವಂತಾಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸೊರಬ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಪವಿತ್ರಾ, ‘ಸಮಾಜಕ್ಕೆ ಹೊಸ ಮಾರ್ಗವನ್ನು ಸಾಹಿತ್ಯ ನೀಡುತ್ತದೆ. 12ನೇ ಶತಮಾನದಲ್ಲಿ ಆರಂಭವಾದ ವಚನ ಸಾಹಿತ್ಯದಿಂದ ಸಮಾಜದಲ್ಲಿ ದೊಡ್ಡ ಕ್ರಾಂತಿ ಉಂಟಾಯಿತು. ವಚನ ಸಾಹಿತ್ಯ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಚನ ಸಾಹಿತ್ಯ ಸರ್ವಕಾಲಿಕವಾಗಿದೆ. ಈ ಕಾರ್ಯಕ್ರಮ ಯುವ ಸಾಹಿತಿಗಳಿಗೆ ಪ್ರೇರಣೆಯಾಗಲಿ’ ಎಂದರು.

ದಿ.ರಾಮಪ್ಪ ಬಿ. ಸದ್ಭಾವನಾ ವೇದಿಕೆ ಅಧ್ಯಕ್ಷ ಡಾಕೇಶ್‌ ತಾಳಗುಂದ, ‘ಎಲೆ ಮರೆ ಕಾಯಿಯಂತೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕವಿಗಳನ್ನು ಹಾಗೂ ಲೇಖಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಯುವಸಾಹಿತಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನಾನು ಪುಸ್ತಕ ಬರೆಯಲು ಮಾರ್ಗದರ್ಶನ ನೀಡಿದ ಹಿರಿಯರಿಗೂ ಹಾಗೂ ಸ್ನೇಹಿತರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು
ಹೇಳಿದರು.

ಪ್ರಣವ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ಮಹೇಶ್ವರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್‌. ಹುಚ್ಚರಾಯಪ್ಪ, ತಾಲ್ಲೂಕು ಜಾನಪದ ಪರಿಷತ್‌ ಅಧ್ಯಕ್ಷ ಬಿ. ಪಾಪಯ್ಯ, ಕುಂಚೂರು ಶಾಲೆ ಮುಖ್ಯಶಿಕ್ಷಕ ಸುರೇಶ ಅಂದಾನಪ್ಪ, ಸಂಸ್ಕೃತ ಶಿಕ್ಷಕ ಸಿದ್ದೇಶ್ವರ ದೇವರು, ಸಮಾಜ ಸೇವಕ ವಿಜಯ ರುದ್ರಪ್ಪ ಪೂಜಾರ್, ಮತ್ತೂರು ಶಾಲೆ ಮುಖ್ಯಶಿಕ್ಷಕಿ ಕರಿಬಸಮ್ಮ, ರೇಣುಕಮ್ಮ ರಾಮಪ್ಪ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕವಿಗಳು ಕವಿಗೋಷ್ಠಿಯಲ್ಲಿ ಕಾವ್ಯ ವಾಚಿಸಿದರು. ಈಸೂರು ಗ್ರಾಮದ ಕಲಾವಿದ ಬೇಗೂರು ಶಿವಪ್ಪ ಲಾವಣಿ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.