ADVERTISEMENT

ಕಾಂತರಾಜ್‌ ವರದಿ ಯಥಾವತ್ ಅನುಷ್ಠಾನವಾಗಲಿ: ರಾಮಚಂದ್ರಪ್ಪ ಒತ್ತಾಯ

ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕಾರಿ ಮಂಡಳಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 7:01 IST
Last Updated 19 ಅಕ್ಟೋಬರ್ 2021, 7:01 IST
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌ ಮಾತನಾಡಿದರು.
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌ ಮಾತನಾಡಿದರು.   

ಶಿವಮೊಗ್ಗ: ಬಿಜೆಪಿ ಸರ್ಕಾರ ಜಾತಿ ಜನಗಣತಿ ಮುಚ್ಚಿಡುತ್ತಿದೆ. ಕಾಂತರಾಜ್‌ ವರದಿಯನ್ನು ಸರ್ಕಾರ ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಅಂಗವಾಗಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕಾರಿ ಮಂಡಳಿ ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವ ಬಲಾಢ್ಯ ಜಾತಿಗಳು ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿರುವುದು ಸಾಮಾನ್ಯ ಸಂಗತಿ. ಇದರಿಂದ ಹಿಂದುಳಿದ ಹಾಗೂ ಇತರೆ ಜಾತಿಗಳ ನಿಖರ ಜನಸಂಖ್ಯೆ ಅರಿತುಕೊಳ್ಳುವ ಸಲುವಾಗಿ ₹ 162 ಕೋಟಿ ವೆಚ್ಚದಲ್ಲಿ
ಕಾಂತರಾಜ್‌ ವರದಿ ರೂಪಿಸಲಾಗಿದೆ. ಆದರೆ, ಈ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ₹ 2 ಸಾವಿರ ಕೋಟಿಗೆ ಒತ್ತಾಯ:ಸರ್ಕಾರ ಎಲ್ಲ ಪ್ರಬಲ ಜಾತಿಗಳಿಗೆ ನಿಗಮ ಮಂಡಳಿ ಮಾಡಿ ₹ 500 ಕೋಟಿಯಿಂದ ₹ 1000 ಕೋಟಿ ಕೊಡುತ್ತಿದೆ. ಕಳೆದ ಬಜೆಟ್‌ನಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಕೇವಲ ₹ 80 ಕೋಟಿ ಘೋಷಣೆ ಮಾಡಿದೆ. ಅದರಲ್ಲಿ ಇಲ್ಲಿಯವರೆಗೆ ಕೊಟ್ಟಿರುವುದು ಕೇವಲ ₹ 20 ಕೋಟಿ. ಎರಡು ವರ್ಷಗಳಿಂದ ಹಿಂದುಳಿದ ವರ್ಗಗಳ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನವನ್ನೇ ಬಿಡುಗಡೆ ಮಾಡಿಲ್ಲ. ಕೇಳಿದವರನ್ನೇ ಸರ್ಕಾರದ ಬಳಿ ಹಣ ಇಲ್ಲ ಅನ್ನುತ್ತಾರೆ. ಆದರೆ, ಹೊಸ, ಹೊಸ ನಿಗಮಗಳನ್ನು ಸ್ಥಾಪಿಸಿ ಹಣ ಕೊಡುತ್ತಿದೆ. ಸರ್ಕಾರ ಕೂಡಲೇ ದೇವರಾಜು ಅರಸು ಅಭಿವೃದ್ಧಿ ಮಂಡಳಿಗೆ ₹ 2 ಸಾವಿರ ಕೋಟಿ ಕೊಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ನೇತೃತ್ವ: ‘ಕಾಂತರಾಜ್‌ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಅ.30ರಂದು ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ನೇತೃತ್ವವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಹಿಸಿಕೊಳ್ಳುವರು’ ಎಂದು ಮಾಹಿತಿ ನೀಡಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆ ಕಾಣದೆ ಇರುವ ಕಾರಣ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಜನರ ಧ್ವನಿ ದೊಡ್ಡದಾಗಬೇಕು’ ಎಂದರು.

‘ದೇಶದಲ್ಲಿ ಪರಿಶಿಷ್ಟ ಸಮುದಾಯಗಳು ಅಪಮಾನಕ್ಕೆ ಒಳಗಾಗುತ್ತಿಲ್ಲ. ಹಿಂದುಳಿದ, ಅದರಲ್ಲೂ ಅತಿ ಹಿಂದುಳಿದ, ಕುಲಕಸುಬನ್ನೇ ನಂಬಿಕೊಂಡು ಬದುಕಿದ್ದ ನೂರಾರು ಸಮುದಾಯಗಳು ಸಹ ಅಪಮಾನಕ್ಕೆ ಒಳಗಾಗುತ್ತಿವೆ. ಹಿಂದುಳಿದ ಜಾತಿಗಳ ಇಂದಿನ ಸ್ಥಿತಿಗೆ ನಾವುಗಳೇ ಕಾರಣ. ನ್ಯೂನತೆ ಎಲ್ಲಿದೆ ಎಂದು ಮೊದಲು ಪತ್ತೆಹಚ್ಚಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಬೇಕಿದೆ’ ಎಂದು ಕರೆ ನೀಡಿದರು.

ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ವೆಂಕಟ್‌ ರಾವ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು, ಪ್ರಮುಖರಾದ ಕಲಗೋಡು ರತ್ನಾಕರ್, ಗಿರಿಯಪ್ಪ, ಎಸ್.ಬಿ. ಅಶೋಕ್ ಕುಮಾರ್, ಜಿ.ಡಿ. ಮಂಜುನಾಥ್,ಎನ್. ರಮೇಶ್, ಹಾಲಪ್ಪ, ರಾಮಚಂದ್ರಪ್ಪ, ಧರ್ಮರಾಜ್, ನಗರದ ಮಹದೇವಪ್ಪ, ಗೋಣಿ ಮಾಲತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.