ADVERTISEMENT

ಮಾಧ್ಯಮ ಸತ್ಯದ ಪ್ರತಿಜ್ಞೆ ಮಾಡಲಿ; ಪ್ರಸನ್ನ

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 5:18 IST
Last Updated 17 ಸೆಪ್ಟೆಂಬರ್ 2022, 5:18 IST
ಶಿವಮೊಗ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಪತ್ರಕರ್ತರ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಚರಕ ಪ್ರಸನ್ನ, ಡಾ.ಧನಂಜಯ ಸರ್ಜಿ, ಸಿ.ಎಸ್.ಷಡಾಕ್ಷರಿ, ಶಿವಮೊಗ್ಗ ನಂದನ್, ಗೋಪಾಲ ಯಡಗೆರೆ ಮತ್ತಿತರರು ಚಿತ್ರದಲ್ಲಿದ್ದಾರೆ
ಶಿವಮೊಗ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಪತ್ರಕರ್ತರ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ಮಾದಕ ವಸ್ತು ವಿರೋಧಿ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಚರಕ ಪ್ರಸನ್ನ, ಡಾ.ಧನಂಜಯ ಸರ್ಜಿ, ಸಿ.ಎಸ್.ಷಡಾಕ್ಷರಿ, ಶಿವಮೊಗ್ಗ ನಂದನ್, ಗೋಪಾಲ ಯಡಗೆರೆ ಮತ್ತಿತರರು ಚಿತ್ರದಲ್ಲಿದ್ದಾರೆ   

ಶಿವಮೊಗ್ಗ:ಮಾಧ್ಯಮ ಇಂದು ಸತ್ಯದ ಪ್ರತಿಜ್ಞೆ ಮಾಡಬೇಕಿದೆ. ವರದಿಗಾರರು ಸಾಮಾಜಿಕ ಬದ್ಧತೆಯ ಜೊತೆಗೆ ವಾಸ್ತವತೆ ಹಾಗೂ ಸತ್ಯ ಗ್ರಹಿಸಿದಾಗ ಮಾತ್ರ ಉತ್ತಮವಾಗಿ ವರದಿ ಮಾಡಲು ಸಾಧ್ಯ ಎಂದು ಹಿರಿಯ ರಂಗಕರ್ಮಿ ಚರಕ ಪ್ರಸನ್ನ ಕಿವಿಮಾತು ಹೇಳಿದರು.

ನಗರದಲ್ಲಿ ಶುಕ್ರವಾರ ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ, ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಧರ್ಮಗಳನ್ನು ಕೇವಲ ಕಚ್ಚಾಡುವುದಕ್ಕೆ ಸೀಮಿತ ಮಾಡಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಭಾರತೀಯರಾಗಿ ಒಂದಾಗಿರಬೇಕು. ರಾಜಕೀಯವಾಗಿ ವಿಮರ್ಶೆ ಮಾಡಿ ನೋಡದೆ ಇದ್ದಲ್ಲಿ ಭಾರತೀಯತೆ ಸುಳ್ಳು, ಭಾರತಾಂಬೆ ಸುಳ್ಳು, ದೇಶ ಕಟ್ಟುತ್ತೇವೆ ಎಂಬುದು ಸುಳ್ಳಾಗುತ್ತದೆ. ಧರ್ಮವೇ ಜಗಳಕ್ಕೆ ಪೂರಕವಾಗುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪತ್ರಕರ್ತರಾದವರು ಹೆದರಿಕೆ ಬದಿಗಿಟ್ಟು ಧೈರ್ಯದಿಂದ ವಸ್ತು ಸ್ಥಿತಿ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.

ADVERTISEMENT

ಆರೋಗ್ಯ ಕಾರ್ಡ್ ವಿತರಿಸಿ ಬಳಿಕ ಮಾತನಾಡಿದ ಸರ್ಜಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಧನಂಜಯ ಸರ್ಜಿ,
ಜನರು ಯಮರಾಯ, ಕಾನೂನು ಹಾಗೂ ಪತ್ರಕರ್ತರಿಗೆ ಹೆದರುತ್ತಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸಂವಿಧಾನದ 4 ನೇ ಅಂಗವಾಗಿ ಪತ್ರಿಕೋದ್ಯಮ ಗುರುತಿಸಿಕೊಂಡಿದೆ ಎಂದರು.

ಊಟ ದೇಹಕ್ಕೆ ಹಿತ, ಆಟ ದೇಹಕ್ಕೆ ಹಿತ, ಪಾಠ ಜ್ಞಾನಕ್ಕೆ ಹಿತ, ಸಮಾಜಕ್ಕೆ ಹಿತವಾದ ಕೆಲಸ, ಸಮಾಜಮುಖಿ ಕಾರ್ಯ ಮಾಡಿದರೆ ಮನಸ್ಸಿಗೆ ಸ್ಫೂರ್ತಿ, ಸಂತೋಷ ಸಿಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಪತ್ರಕರ್ತರನ್ನು ಸಮಾಜದ ಕನ್ನಡಿ ಎನ್ನುತ್ತಾರೆ. ಹೀಗಾಗಿ ಸಮಾಜದಲ್ಲಿನ ಅಂಕು ಡೊಂಕು ಸರಿಪಡಿಸುವ ಕಾರ್ಯ ಪತ್ರಕರ್ತ ರಾದವರು ಮಾಡಬೇಕು ಎಂದರು.

ಶಿವಮೊಗ್ಗ ಪ್ರೆಸ್ಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಸಂಘದ ಗೌರವಾಧ್ಯಕ್ಷ ಚಂದ್ರಕಾಂತ್ ಮಾತನಾಡಿದರು. ನೂತನ ಅಧ್ಯಕ್ಷ ಗೋಪಾಲ್ ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕಾಚಿನಕಟ್ಟೆ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಮಚಂದ್ರ ಗುಣಾರಿ ಪ್ರಾರ್ಥಿಸಿದರು. ಇದೇ ವೇಳೆ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಸರ್ಜಿ ಆಸ್ಪತ್ರೆಯ ಆರೋಗ್ಯಕಾರ್ಡ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.