ADVERTISEMENT

ಅಲೆಮಾರಿ ಜನಾಂಗ ಮುಖ್ಯವಾಹಿನಿಗೆ ಬರಲಿ

ರಾಜ್ಯ ಅಲೆಮಾರಿ, ಅರೆ ಅಲೆಮಾರಿ ನಿಗಮದ ನಿರ್ದೇಶಕ ಲಕ್ಷ್ಮಣ ಕೆ.ಎಚ್.

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 3:59 IST
Last Updated 7 ಜನವರಿ 2021, 3:59 IST
ಆನಂದಪುರ ಸಮೀಪದ ಭೈರಾಪುರದಲ್ಲಿ ಬುಧವಾರ ನಡೆದ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಕುರಿತ ಕಾರ್ಯಾಗಾರವನ್ನು ರಾಜ್ಯ ಅಲೆಮಾರಿ ನಿಗಮದ ನಿರ್ದೇಶಕ ಲಕ್ಷ್ಮಣ ಕೆ.ಎಚ್. ಉದ್ಘಾಟಿಸಿದರು
ಆನಂದಪುರ ಸಮೀಪದ ಭೈರಾಪುರದಲ್ಲಿ ಬುಧವಾರ ನಡೆದ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಕುರಿತ ಕಾರ್ಯಾಗಾರವನ್ನು ರಾಜ್ಯ ಅಲೆಮಾರಿ ನಿಗಮದ ನಿರ್ದೇಶಕ ಲಕ್ಷ್ಮಣ ಕೆ.ಎಚ್. ಉದ್ಘಾಟಿಸಿದರು   

ಆನಂದಪುರ: ಅಲೆಮಾರಿ ಜನಾಂಗದ ರಕ್ಷಣೆಗಾಗಿ ಹಾಗೂ ಅವರಿಗೆ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗಪಡಿಸಿಕೊಳ್ಳುವ ಮೂಲಕ ಅಲೆಮಾರಿ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ರಾಜ್ಯ ಅಲೆಮಾರಿ, ಅರೆ ಅಲೆಮಾರಿ ನಿಗಮದ ನಿರ್ದೇಶಕ ಲಕ್ಷ್ಮಣ ಕೆ.ಎಚ್. ಸಲಹೆ ನೀಡಿದರು.

ಸಮೀಪದ ಭೈರಾಪುರದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಗೌತಮಪುರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗೊಲ್ಲರು ಹಾಗೂ ಇತರೆ ಸಮುದಾಯಗಳಿಗೆ ಸರ್ಕಾರದ ಸೌಲಭ್ಯ ಕುರಿತ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

73 ವರ್ಷಗಳಲ್ಲಿ 53 ಅಲೆಮಾರಿ ಜನಾಂಗಗಳನ್ನು ಗುರುತಿಸಲಾಗಿತ್ತು. ಇದೀಗ 20ರಿಂದ 30 ಅಲೆಮಾರಿ ಜನಾಂಗಗಳು ಮಾತ್ರ ಉಳಿದುಕೊಂಡಿವೆ. ಜೋಗಿ, ಬುಡಬುಡಿಕೆ, ಕೊರವಂಜಿ ಸೇರಿ ಅನೇಕ ಅಲೆಮಾರಿ ಜನಾಂಗಗಳು ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಅದರಲ್ಲಿಯೇ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಆದರೆ ಇಂದು ಎಲ್ಲ ಜನಾಂಗಗಳು ತೀವ್ರ ಸಂಕಷ್ಟದಲ್ಲಿವೆ ಎಂದರು.

ADVERTISEMENT

ಲಕ್ಷಾಂತರ ಅಲೆಮಾರಿ ಜನರಿಗೆ ಗುರುತಿನ ಪತ್ರವೂ ಇಲ್ಲ. ಇದರಿಂದ ಸರ್ಕಾರದ ಸೌಲಭ್ಯ ಅವರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಅಲೆಮಾರಿ ಜನಾಂಗಕ್ಕೆ ಭದ್ರ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ನಾಗೇಶ್, ‘ಅಲೆಮಾರಿ ಜನಾಂಗಕ್ಕೆ ತನ್ನದೆ ಆದ ಕಲೆಯ ನೆಲೆ ಇರುತ್ತದೆ. ಸರ್ಕಾರ ಜನಾಂಗವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಜೊತೆಗೆ ಅವರ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಅಲೆಮಾರಿ ಜನಾಂಗದಿಂದ ಬಂದು ಉನ್ನತ ಸ್ಥಾನಕ್ಕೆ ಹೋದವರು ತಮ್ಮ ಮೂಲವನ್ನು ಮರೆಯಬಾರದು. ತಮ್ಮ ಜೊತೆಗೆ ಜನಾಂಗವನ್ನು ಬೆಳೆಸುವ ಕೆಲಸ ಮಾಡುವ ಅಗತ್ಯವಿದೆ. ಅಲೆಮಾರಿ ಜನಾಂಗಕ್ಕೆ ಮೂಢನಂಬಿಕೆ, ಕಂದಾಚಾರ ಶಾಪವಾಗಿ ಪರಿಣಮಿಸಿದೆ. ನಿಗಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪುಷ್ಪಲತಾ, ‘ತಾಲ್ಲೂಕಿನಲ್ಲಿ ಅಲೆಮಾರಿ ಜನಾಂಗಕ್ಕೆ ನೀಡಲು ಸರ್ಕಾರದಿಂದ 135 ಮನೆಗಳು ಬಂದಿವೆ. ಆದರೆ ಈ ತನಕ ಫಲಾನುಭವಿಗಳು ಸಿಗದೆ ಇರುವುದರಿಂದ ಕೆಲವು ಮನೆಗಳು ವಾಪಸ್ ಹೋಗುವ ಸಾಧ್ಯತೆ ಇದೆ. ಅಲೆಮಾರಿ ಜನಾಂಗಗಳು ತಮ್ಮ ಅಲೆದಾಟ ನಿಲ್ಲಿಸಿ ಒಂದು ಕಡೆ ನೆಲೆನಿಂತು ಸೌಲಭ್ಯ ಪಡೆಯುವಂತೆ ಆಗಬೇಕು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಮ್ಯ, ಕಾಲಭೈರವೇಶ್ವರ ಟ್ರಸ್ಟ್ ಅಧ್ಯಕ್ಷ ಲಿಂಗಪ್ಪ ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.