ಈಸೂರು (ಶಿಕಾರಿಪುರ): ಜಾನಪದ ಸಾಹಿತ್ಯದಲ್ಲಿಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಸಾಗರದ ಲೇಖಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಈಸೂರು ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಜೋಗಿಹಳ್ಳಿ ಹಸನ್ ಸಾಬ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಾನಪದ ಸಾಹಿತ್ಯ’ ವಿಷಯ ಕುರಿತು ಅವರು ಮಾತನಾಡಿದರು.
‘ಹಳ್ಳಿಗಾಡಿನ ಬದುಕು ಜಾನಪದ ಸಾಹಿತ್ಯದ ಮೂಲ. ಜಾನಪದ ಸಾಹಿತ್ಯದಲ್ಲಿ ಮೂಲ ಶಿಕ್ಷಣದ ಪಾಠ ಇವೆ. ಮನುಷ್ಯನ ಅರಿವನ್ನು ವಿಸ್ತರಿಸಲು ಈ ಸಾಹಿತ್ಯ ಪೂರಕವಾಗಿದೆ. ನಮ್ಮ ಪೂರ್ವಜರು ಜಾನಪದ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ’ ಎಂದರು.
‘ಕೋಣೆ ಶಿಶು ಕೊಳಿತು, ಓಣಿ ಶಿಶು ಬೆಳಿತು ಎಂಬ ಗಾದೆ ಮಾತುಗಳು ಮಕ್ಕಳ ಬೆಳವಣಿಗೆಯನ್ನು ಹೇಳಿದೆ. ಜಾನಪದ ಸಾಹಿತ್ಯ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಜಾನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು. ಜಾನಪದ ಗೀತೆ, ಗಾದೆ, ಒಗುಟುಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕು’ ಎಂದರು.
‘ಹಳ್ಳಿಗಾಡಿನಲ್ಲಿ ಜಾನಪದ ಸಾಹಿತ್ಯ ಉಳಿದಿದೆ. ವಿದ್ಯಾರ್ಥಿಗಳ ವ್ಯಕ್ತಿತ್ಚ ವಿಕಸನಕ್ಕೆ ಜಾನಪದ ಸಾಹಿತ್ಯದಲ್ಲಿರುವ ಮೌಲ್ಯಗಳು ಸಹಕಾರಿಯಾಗಿವೆ. ಜೀವನದಲ್ಲಿ ಸಾಧನೆ ಮಾಡಿದ ಮಹನೀಯರು ಪ್ರೇರಣೆಯಾಗಬೇಕು’ ಎಂದುಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಇಒ ಪರಮೇಶ್ ಸಲಹೆ ನೀಡಿದರು.
ಈಸೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರವೀಣ್ ಮಹಿಷಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಆಶಯ ನುಡಿಗಳನ್ನಾಡಿದರು.
ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಹಾಗೂ ಜಾನಪದ ಕಲಾವಿದ ಬೇಗೂರು ಶಿವಪ್ಪ ಜನಪದ ಗೀತೆಗಳ ಗಾಯನ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜಪ್ಪ,ದತ್ತಿದಾನಿ ಡಾ. ರಿಯಾಜ್ ಬಾಷಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಪ್ಪಯ್ಯ, ಕಸಾಪ ಸದಸ್ಯ ಕಾಳೇಶಪ್ಪ, ಉಪನ್ಯಾಸಕರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.