ADVERTISEMENT

ಲಿಂಗನಮಕ್ಕಿ: 60 ಟಿಎಂಸಿ ಅಡಿ ನೀರು ಹೊರಕ್ಕೆ?

ಸಿಗಂದೂರು ಸೇತುವೆ ಕಾಮಗಾರಿಗೆ ನೆರವಾಗಲು ಎನ್‌ಎಚ್‌ಎಐಯಿಂದ ಪತ್ರ

ಚಂದ್ರಹಾಸ ಹಿರೇಮಳಲಿ
Published 19 ಜನವರಿ 2022, 17:31 IST
Last Updated 19 ಜನವರಿ 2022, 17:31 IST
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆ   

ಶಿವಮೊಗ್ಗ: ಸಾಗರ ತಾಲ್ಲೂಕಿನ ಸಿಗಂದೂರು–ತುಮರಿ ಸೇತುವೆ ಕಾಮಗಾರಿಗಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವನ್ನು 1,760 ಅಡಿಗೆ ತಗ್ಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಕೆಪಿಸಿಗೆ ಪತ್ರ ಬರೆದಿರುವುದು ವಿವಾದ ಹುಟ್ಟುಹಾಕಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 151.64 ಟಿಎಂಸಿ ಅಡಿ ನೀರಿದೆ. (ಸಮುದ್ರಮಟ್ಟದಿಂದ 1804.15 ಅಡಿ) ಹೆದ್ದಾರಿ ಪ್ರಾಧಿಕಾರದ ಪತ್ರಕ್ಕೆ ಕೆಪಿಸಿ ಮನ್ನಣೆ ನೀಡಿದರೆ 60 ಟಿಎಂಸಿ ಅಡಿ ನೀರು ಹೊರಗೆ ಹಾಕಬೇಕಾಗುತ್ತದೆ. ಇದು ಬೇಸಿಗೆ ಸಮಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಲಿದೆ.

2018 ಫೆ.19ರಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್‌ಕಾನ್ ಕಂಪನಿ ತುಮರಿ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದೆ.
ಸಾಗರ ನಗರದ ಶಿವಪ್ಪ ನಾಯಕ ವೃತ್ತದಿಂದ ಸಿಗಂದೂರು ಸಮೀಪದ ಮರಕುಟುಕದವರೆಗೆ 78 ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಮಾರ್ಗಮಧ್ಯದಲ್ಲಿ ಬರುವ ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ ₹ 423.15 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಸೇತುವೆ
ಪೂರ್ಣಗೊಂಡರೆ ಬೈಂದೂರು–ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ.

ADVERTISEMENT

2.5 ಕಿ.ಮೀ. ಉದ್ದ, 16 ಮೀಟರ್‌ ಅಗಲದ 30ರಿಂದ 55 ಮೀಟರ್‌ ಎತ್ತರದ, 17 ಪಿಲ್ಲರ್‌ ಒಳಗೊಂಡ ಕೇಬಲ್ ತಂತ್ರಜ್ಞಾನ ಆಧಾರಿತ ಸೇತುವೆ ಕಾರ್ಯ ಶೇ 35ರಷ್ಟು ಪೂರ್ಣಗೊಂಡಿದೆ. ನಿಯಮದಂತೆ ಕಂಪನಿ ಕಾಮಗಾರಿಯನ್ನು 2023ರ ಮೇ ವೇಳೆಗೆ ಪೂರ್ಣಗೊಳಿಸಬೇಕಿದೆ. ಈ ಬಾರಿ ಸುರಿದ ಹಿಂಗಾರು ಮಳೆಯಿಂದ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಹಾಗಾಗಿ, ನೀರಿನ ಪ್ರಮಾಣ ತಗ್ಗಿಸುವಂತೆ ಕೋರಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಬರೆದ ಪತ್ರತಲುಪಿದೆ. ದಿಢೀರನೆ ಅಷ್ಟೊಂದು ಪ್ರಮಾಣದ ನೀರನ್ನು ನದಿಗೆ ಹರಿಸಲು, ವಿದ್ಯುತ್ ಉತ್ಪಾದನೆಗೆ ಬಳಸಲು ಸಾಧ್ಯವಿಲ್ಲ. ಹಾಗಾಗಿ, ಮಾರ್ಗದರ್ಶನ ಕೋರಿನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದು ಶರಾವತಿ ಕಣಿವೆ ಪ್ರದೇಶದ ಕೆಪಿಸಿ ಮುಖ್ಯ ಎಂಜಿನಿಯರ್ ಮಹೇಶ್ ಪ್ರತಿಕ್ರಿಯಿಸಿದರು.

ಸೇತುವೆ ವಿಳಂಬವಾದರೆ ಯಾರಿಗೂ ನಷ್ಟವಿಲ್ಲ. ಜಲಾಶಯದ ನೀರು ಹರಿಯಬಿಟ್ಟರೆ ನದಿಗೇ ನಷ್ಟ. ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎನ್ನುವುದು ಸ್ಥಳೀಯರ ಒತ್ತಾಯ.

‘ಸೇತುವೆ ಕಾಮಗಾರಿಗೆ ಜಲಾಶಯದ ನೀರು ತಗ್ಗಿಸುವ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸದಿದ್ದರೂ ಅನಧಿಕೃತವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ನೀರು ತಗ್ಗಿಸುವ ನೆಪದಲ್ಲಿ ಖಾಸಗಿ ವಿದ್ಯುತ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದು ಆರೋಪಿಸುತ್ತಾರೆ ಸಾಗರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.