ADVERTISEMENT

ಲಿಂಗನಮಕ್ಕಿ ಜಲವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯಾರಂಭ: ಆರ್. ರಮೇಶ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:40 IST
Last Updated 15 ಆಗಸ್ಟ್ 2025, 5:40 IST
14ಕೆಆರ್ ಜಿ1ಇಪಿ : ಕಾರ್ಗಲ್ ಸಮೀಪದಲ್ಲಿರುವ ಲಿಂಗನಮಕ್ಕಿ ಜಲವಿದ್ಯುದಾಗರದ ರಮ್ಯ ನೋಟ
14ಕೆಆರ್ ಜಿ1ಇಪಿ : ಕಾರ್ಗಲ್ ಸಮೀಪದಲ್ಲಿರುವ ಲಿಂಗನಮಕ್ಕಿ ಜಲವಿದ್ಯುದಾಗರದ ರಮ್ಯ ನೋಟ   

ಕಾರ್ಗಲ್: ನಾಡಿಗೆ ಜಲ ವಿದ್ಯುತ್ ಮೂಲಕ ಬೆಳಕು ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ಜಲವಿದ್ಯುದಾಗರದ ವಿದ್ಯುತ್ ಘಟಕ ಮರಳಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಆರ್. ರಮೇಶ್ ಮಾಹಿತಿ ನೀಡಿದರು.

‘15 ದಿನಗಳಿಂದ 1 ಘಟಕವನ್ನು ವಾರ್ಷಿಕ ನಿರ್ವಹಣೆ ಕಾರ್ಯಕ್ಕಾಗಿ ಸ್ಥಗಿತಗೊಳಿಸಲಾಗಿತ್ತು. ಈ ಘಟಕವನ್ನು ರಾಜ್ಯದ ಅನುಭವಿ ತಾಂತ್ರಿಕರನ್ನು ಒಳಗೊಂಡ ಸಿ.ಕೆ. ಎಂಜಿನಿಯರ್ಸ್ ಕಾರ್ಗಲ್ ತಂಡದವರು ನಿಗದಿತ ಅವಧಿಯೊಳಗೆ ನಿರ್ವಹಣಾ ಕೆಲಸವನ್ನು ಪೂರೈಸಿ ಸ್ಥಗಿತಗೊಂಡ ವಿದ್ಯುದಾಗರ ಮರಳಿ ಉತ್ಪಾದನೆಯಲ್ಲಿ ತೊಡಗಲು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

‘ಹಾಲಿ 26 ಮೆಗಾವ್ಯಾಟ್ ವಿದ್ಯುತ್ ಅನ್ನು ಎಲ್.ಪಿ.ಎಚ್. ಸ್ಥಾವರದಲ್ಲಿ ಉತ್ಪಾದಿಸಲಾಗುತ್ತಿದೆ. ಲಿಂಗನಮಕ್ಕಿಯಲ್ಲಿರುವ ಮತ್ತೊಂದು ಘಟಕದ ರನ್ನರ್ ಬ್ಲೇಡ್ ಒಡಕಿನ ಕಾರಣ 15 ತಿಂಗಳಿನಿಂದ ದುರಸ್ತಿಯಲ್ಲಿದ್ದು, ಈಗಾಗಲೇ ಕೇಂದ್ರ ಕಚೇರಿಯಿಂದ ಜಾಗತಿಕ ಮಟ್ಟದ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಆದೇಶವನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ನೀಡಲಾಗಿದೆ. 15 ದಿನಗಳ ಒಳಗಾಗಿ 2ನೇ ಘಟಕದ ದುರಸ್ತಿ ಕಾರ್ಯ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ಪ್ರತಿ ನೀರಿನ ಕಣವನ್ನು ವಿದ್ಯುತ್ ಉತ್ಪಾದನೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಕೆಪಿಸಿ ತಾಂತ್ರಿಕ ವರ್ಗ ಪ್ರಯತ್ನ ಮಾಡುತ್ತಿದೆ. ಅಣೆಕಟ್ಟೆಯ ನೀರು ನೇರವಾಗಿ ಮಹಾತ್ಮಾಗಾಂಧಿ ಮತ್ತು ಶರಾವತಿ ಜಲವಿದ್ಯುದಾಗರಕ್ಕೆ ಸ್ಲ್ಯೂಸ್ ಗೇಟಿನ ಮೂಲಕ ಹರಿಸಿದರೆ ವಿದ್ಯುತ್ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ. ಇದನ್ನು ಅರಿತು ಅಣೆಕಟ್ಟೆಯಿಂದ ಹೊರ ಹಾಯಿಸುವ ನೀರನ್ನು ಲಿಂಗನಮಕ್ಕಿ ಜಲ ವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು, ಕೆಳದಂಡೆಯಲ್ಲಿ ನೆಲೆಗೊಂಡಿರುವ ಶರಾವತಿ, ಮಹಾತ್ಮಗಾಂಧಿ ಮತ್ತು ಶರಾವತಿ ಟೈಲ್ ರೇಸ್ ಜಲವಿದ್ಯುದಾಗರಗಳಲ್ಲಿ ಮರು ವಿದ್ಯುತ್ ಉತ್ಪಾದನೆಯಲ್ಲಿ ನೀರಿನ ಕಣಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಳ್ಳುವಂತೆ ಕೆಪಿಸಿ ನಿಗಮದಿಂದ ನೋಡಿಕೊಳ್ಳಲಾಗುತ್ತಿದೆ’ ಎಂದು ಮುಖ್ಯ ಎಂಜಿನಿಯರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.