ADVERTISEMENT

ಮನುಷ್ಯರ ಭಾವಕೋಶಕ್ಕೆ ಸಾಹಿತ್ಯ ಸದಾ ಇಂಧನ

ಕರ್ನಾಟಕ ಸಂಘ: ‍ಪುಸ್ತಕ ಬಹುಮಾನ ವಿತರಿಸಿ ರಂಗಕರ್ಮಿ ಎಂ.ಎನ್.ಸೇತುರಾಮ್ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:54 IST
Last Updated 23 ನವೆಂಬರ್ 2025, 5:54 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ರತ್ನಾಕರ್, ಪಿ.ಕೆ.ಪೈ ಅವರ ಛಾಯಾಚಿತ್ರ ಪ್ರದರ್ಶನ ಹಾಗೂ ವಿನೋದ್‌ಕುಮಾರ್ ಜೈನ್ ಅವರ ನಾಣ್ಯ ಪ್ರದರ್ಶನವನ್ನು ರಂಗಕರ್ಮಿ ಎಂ.ಎನ್. ಸೇತುರಾಮ್ ಉದ್ಘಾಟಿಸಿದರು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ರತ್ನಾಕರ್, ಪಿ.ಕೆ.ಪೈ ಅವರ ಛಾಯಾಚಿತ್ರ ಪ್ರದರ್ಶನ ಹಾಗೂ ವಿನೋದ್‌ಕುಮಾರ್ ಜೈನ್ ಅವರ ನಾಣ್ಯ ಪ್ರದರ್ಶನವನ್ನು ರಂಗಕರ್ಮಿ ಎಂ.ಎನ್. ಸೇತುರಾಮ್ ಉದ್ಘಾಟಿಸಿದರು   

ಶಿವಮೊಗ್ಗ: ಸಾಹಿತ್ಯ ರಚನೆಯಿಂದ ಹಣ ಮಾಡುವುದು ಸಾಧ್ಯವಿಲ್ಲ. ಆದರೆ ಸಾಹಿತ್ಯ ಸೃಷ್ಟಿಯಿಂದ ಸಾಹಿತಿ ಧನ್ಯತಾಭಾವ ಪಡೆಯಬಹುದು. ತನ್ನ ಮನಸ್ಸಿನ ಭಾವನೆಗೆ ಅಕ್ಷರ ರೂಪ ನೀಡಿದ್ದಕ್ಕೆ ಸಂಭ್ರಮಿಸಬಹುದು ಎಂದು ರಂಗಕರ್ಮಿ ಎಂ.ಎನ್.ಸೇತುರಾಮ್ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ಸಂಘದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಮಾತನಾಡಿದ ಅವರು, ಸಾಹಿತಿಯನ್ನು ಹೇಗೆ ಸನ್ಮಾನಿಸಲಾಗುವುದು ಎಂಬುದರ ಆಧಾರದಲ್ಲಿ ಆ ಸಂಘ ಸಂಸ್ಥೆಯ ಯೋಗ್ಯತೆ ನಿರ್ಧಾರವಾಗುತ್ತದೆ. ಪ್ರಶಸ್ತಿ, ಪುರಸ್ಕಾರಗಳು ಸಿಗಲಿ, ಸಿಗದಿರಲಿ ಸಾಹಿತಿ ಎಂದಿಗೂ ತನ್ನ ಸಾಹಿತ್ಯ ರಚನೆಯಿಂದ ವಿಮುಖನಾಗಲಾರ ಎಂದರು.

ಇಂದು ಸಾಹಿತ್ಯ ಪುಸ್ತಕಗಳ ಪ್ರಕಟಣೆ ತೀರಾ ಕಷ್ಟವಾಗಿದೆ. ಪ್ರಕಾಶಕರಿಗೆ ಜನರನ್ನು ತಲುಪುವುದು ಕಷ್ಟವಾಗುತ್ತಿದೆ ಎಂದು ಹೇಳಿದ ಅವರು, ಪ್ರಶಸ್ತಿಗಳಿಂದ ಸಾಹಿತಿಗಳ ಯೋಗ್ಯತೆ ಅಳೆಯಲು ಸಾಧ್ಯವಿಲ್ಲ ಆದರೆ ಗುರುತಿಸಿ, ಗೌರವಿಸುವುದರಿಂದ ಅವರನ್ನು ಸಂತೋಷಪಡಿಸಬಹುದು ಎಂದರು.

ADVERTISEMENT

ಮನುಷ್ಯನನ್ನು ಆತನ ಲೆಕ್ಕಾಚಾರಗಳಿಂದ ಹೊರತಂದು ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವ ಶಕ್ತಿ ಸಾಹಿತಿಗಳಿಗೆ ಇದೆ. ಏಕೆಂದರೆ ಜನರಿಗೆ ಇನ್ನೂ ಭಾವನಾತ್ಮಕ ಸಂವೇದನೆಯಿದೆ. ಸಾಹಿತ್ಯ ಒಂದು ಚರ್ಚೆಯ ಸಂಗತಿ ಎಂದು ನನಗೆಂದೂ ಅನಿಸಲೇ ಇಲ್ಲ. ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆಯಾಗುತ್ತದೆ. ಏನೋ ದೊಡ್ಡ ಕ್ರಾಂತಿ ಆಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಆದರೆ ಕೆಲವರು ಸಾಹಿತಿಗಳನ್ನು ಕಾಣುವ, ಅವರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಬೇಸರವಿದೆ ಎಂದು ಹೇಳಿದರು.

‘ನಿಗದಿತ ಸಮಯಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸದೇ, ಅಲ್ಲಿಗೆ ಬರುವ ಪ್ರಶಸ್ತಿ ಪುರಸ್ಕೃತರಿಗೆ ಸರಿಯಾದ ಆತಿಥ್ಯ ನೀಡದೇ ಕೇವಲ ದಾಖಲೆಗಾಗಿ ಕಾರ್ಯಕ್ರಮ ಆಯೋಜಿಸುವುದನ್ನೂ ಕಂಡಿದ್ದೇನೆ. ಸಾಹಿತಿಗಳಿಗೆ ಪುಸ್ತಕ ನೀಡುವುದರಿಂದ ಅವರಿಗೆ ಹಾರ ಹಾಕುವುದರಿಂದ ಅವರ ಜೀವನ ಸಾಗುವುದಿಲ್ಲ. ಅವರೂ ಮನುಷ್ಯರು ಎಂಬ ವಾಸ್ತವವನ್ನು ಕಾರ್ಯಕ್ರಮದ ಸಂಘಟಕರು ಅರಿತುಕೊಳ್ಳಬೇಕು. ಸಾಹಿತಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಕರ್ನಾಟಕ ಸಂಘ ಮಾದರಿಯಾಗಿದೆ’ ಎಂದು ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು.

ಕರ್ನಾಟಕ ಸಂಘದ ಪ್ರಶಸ್ತಿ; ಸಾಹಿತಿಗಳ ಕನಸು ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಲೇಖಕ ಸಂತೆಬೆನ್ನೂರು ಫೈಜ್ನಟ್ರಾಜ್ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಸಂಘದಿಂದ ಪ್ರಶಸ್ತಿ ಪಡೆಯಬೇಕು ಎಂಬುದು ಎಲ್ಲ ಸಾಹಿತಿಗಳ ಕನಸು. ಶಿವಮೊಗ್ಗದ ಮಣ್ಣಿನಲ್ಲಿ ಸಾಹಿತ್ಯದ ಫಲವತ್ತತೆಯಿದೆ. ಇದೇ ಕಾರಣಕ್ಕೆ ಕರ್ನಾಟಕ ಸಂಘದಲ್ಲಿ 12 ವಿವಿಧ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ಅಷ್ಟೊಂದು ಪ್ರಶಸ್ತಿ ನೀಡುವುದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.