
ಶಿಕಾರಿಪುರ: ಪುರಸಭೆ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ ಎನ್ನುವ ದೂರು ಹೆಚ್ಚು ಕೇಳಿಬರುತ್ತಿರುವ ಕಾರಣಕ್ಕೆ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸುಲಾಪುರ್ ಬುಧವಾರ ಭೇಟಿ ನೀಡಿ ಕಡತ ಪರಿಶೀಲನೆ ಮಾಡಿದರು.
ಅಧಿಕಾರಿಗಳ ಟೇಬಲ್ ಬಳಿ ತೆರಳಿದ ಅವರು ಅಲ್ಲಿರುವ ಕಡತ ಏನು, ಯಾವ ಕೆಲಸಕ್ಕೆ ಸಂಬಂಧಿಸಿದ್ದು, ಯಾವಾಗ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಪಡೆದು ಪರಿಶೀಲಿಸಿದರು. ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದಲೂ ಮಾಹಿತಿ ಪಡೆದರು. ‘ನಿಮ್ಮ ಕೆಲಸಕ್ಕೆ ಹಣ ನೀಡಿದ್ದೀರಾ? ಎಷ್ಟನೇ ಬಾರಿ ಕಚೇರಿಗೆ ಆಗಮಿಸಿದ್ದೀರಿ’ ಎಂದು ಜನರನ್ನು ಪ್ರಶ್ನಿಸಿದರು.
ಕಳೆದ ಡಿ.9ಕ್ಕೆ ನೀಡಿದ ಕಡತ ಈವರೆಗೂ ವಿಲೇವಾರಿ ಆಗದಿರುವುದು ಕಂಡುಬಂದಿತು. 2025ರ ಮೇನಲ್ಲಿ ಸಲ್ಲಿಸಿದ್ದ ಕಡತ ನೋಡಿದ ಅವರು, ಕಡತ ವಿಲೇವಾರಿ ಕಾರ್ಯವೈಖರಿಯನ್ನು ತಕ್ಷಣವೇ ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
‘ಇ-ಸ್ವತ್ತು, ಬಿ–ಖಾತೆ ಮಾಡುವುದಕ್ಕೆ ಕಚೇರಿ ಅಲೆದಾಟ ಹೆಚ್ಚಾಗಿದೆ ಎನ್ನುವ ಹಲವು ದೂರು ಆಧರಿಸಿ ಲೋಕಾಯುಕ್ತ ಎಸ್.ಪಿ. ಎಂ.ಎಸ್.ಕವಲಾಪುರೆ ಅವರ ಸೂಚನೆ ಮೇರೆಗೆ ಪರಿಶೀಲನೆ ನೀಡಲಾಯಿತು. 714 ಇ–ಸ್ವತ್ತು ಅರ್ಜಿ ವಿಲೇವಾರಿಗೆ ಬಾಕಿ ಇವೆ. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು, ಜನರನ್ನು ವಿನಾಕಾರಣ ಅಲೆದಾಡಿಸಿದ್ದು ಕೇಳಿ ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮತ್ತೊಬ್ಬ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ ಮೈಲಾರ ಹೇಳಿದರು.
ಪಿ.ಸಿ.ಆನಂದ, ಎಚ್.ಸಿ.ಟೀಪಪ್ಪ, ಎಚ್.ಸಿ.ಮಂಜುನಾಥ, ಆದರ್ಶ, ಚನ್ನೇಶ್, ಚಂದ್ರೀಬಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.