ಶಿವಮೊಗ್ಗ: ದುರಾಡಳಿತ, ಲಂಚಕ್ಕೆ ಬೇಡಿಕೆ, ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ಮೇರೆಗೆ ಸೋಮವಾರ ಲೋಕಾಯುಕ್ತ ಪೊಲೀಸರು, ಶಿವಮೊಗ್ಗದ ಏಳು ತಹಶೀಲ್ದಾರ್ ಕಚೇರಿಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ದಾವಣಗೆರೆ, ಚಿತ್ರದುರ್ಗದಿಂದ ಬಂದಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನಾಲ್ಕು ತಂಡ ಹಾಗೂ ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಅಧಿಕಾರಿಗಳನ್ನೊಳಗೊಂಡ ನಾಲ್ಕು ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈ ಪೈಕಿ ಒಂದು ತಂಡ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿತ್ತು.
ಪರಿಹಾರವಾಗದೇ ಇರುವ ಸಾರ್ವಜನಿಕರ ಅಹವಾಲು, ಕಚೇರಿಯಲ್ಲಿ ಸಿಬ್ಬಂದಿಯ ಹಾಜರಾತಿ ವಿವರ, ಬಾಕಿ ಇರುವ ಕಡತಗಳು, ಸುದೀರ್ಘ ಕಾಲದಿಂದ ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣ, ಹಕ್ಕು ಬದಲಾವಣೆ, ಭೂ ಮಂಜೂರಾತಿ, ಭೂಮಿ, ಬಗರ್‌ಹುಕುಂ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಬಗ್ಗೆಯೂ ಮಾಹಿತಿ ಪಡೆದರು.
ಜಮೀನುಗಳಿಗೆ ದಾರಿಗೆ ಬೇಡಿಕೆ, ಸಿಂಧುತ್ವ ಪ್ರಮಾಣ ಪತ್ರ, ಮೈನಾರಿಟಿ, ಸಾಲ್ವೆನ್ಸಿ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ ಪಡೆಯಲು ಸಲ್ಲಿಕೆಯಾದ ಅರ್ಜಿಗಳು ಅದರಲ್ಲಿ ನಿಗದಿತ ಕಾಲಮಿತಿಯಲ್ಲಿ ಎಷ್ಟು ವಿಲೇವಾರಿ ಆಗಿವೆ. ಎಷ್ಟು ಬಾಕಿ ಉಳಿದಿವೆ ಎಂಬುದನ್ನು ಪರಿಶೀಲಿಸಿದರು.
ಈ ಬಾರಿ ಅತಿವೃಷ್ಟಿ ವೇಳೆ ಮನೆ, ಜಾನುವಾರುಗಳಿಗೆ ಆಗಿರುವ ಹಾನಿ, ಪರಿಹಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದರು.
ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ, ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಈ ತಂಡಗಳ ಮೇಲ್ವಿಚಾರಣೆ ನಡೆಸಲಾಯಿತು.
‘ದಾಳಿ ಪರಿಶೀಲನೆ ಮುಂದುವರೆಯಲಿದೆ’
ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿನ ದುರಾಡಳಿತದ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಈ ಪರಿಶೀಲನೆ ನಡೆಸಲಾಗಿದೆ. ಇದು ಮುಂದುವರೆಯಲಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.