ಶಿವಮೊಗ್ಗ: ಖರೀದಿಸಿದ್ದ ಆಶ್ರಯ ಮನೆಯ ಖಾತೆ ಮಾಡಿಕೊಡಲು ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಎ.ಪಿ.ಶಶಿಧರ್ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೊಮ್ಮನಕಟ್ಟೆಯ ನಿವಾಸಿ ಮೊಹಮ್ಮದ್ ಆಸಿಫ್ ಉಲ್ಲಾ ಅಲ್ಲಿನ ಆಶ್ರಯ ಬಡಾವಣೆಯಲ್ಲಿ ಅಮ್ಜದ್ ಅಲಿ ಅವರಿಂದ ಮನೆ ಖರೀದಿಸಿದ್ದರು. ಅದನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಪಾಲಿಕೆಯ ಆಶ್ರಯ ಕಚೇರಿ ಅಧಿಕಾರಿ ಶಶಿಧರ್ ಅವರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಿದ್ದರು. ಆದರೆ ಖಾತೆ ಮಾಡಿಕೊಡಲು ಶಶಿಧರ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮೊಹಮ್ಮದ್ ಆಸಿಫ್ ಉಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ನಿಗದಿಯಂತೆ ಶಿವಮೊಗ್ಗದ ನೆಹರೂ ರಸ್ತೆಯ ಸುಭಾಷ್ ಚಂದ್ರಬೋಸ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿರುವ ಆಶ್ರಯ ಕಚೇರಿಯಲ್ಲಿ ಸಂಜೆ ಮೊಹಮ್ಮದ್ ಆಸಿಫ್ ಉಲ್ಲಾ ಅವರಿಂದ ಶಶಿಧರ್ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್ ದಾಳಿ ನಡೆಸಿ ವಶಕ್ಕೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.