ADVERTISEMENT

ಕಾಶ್ಮೀರ್ ಫೈಲ್ಸ್‌ಗೆ ವಿನಾಯಿತಿ, ರಾಷ್ಟ್ರಧ್ವಜಕ್ಕೆ ಹಣ: ಮಧು ಬಂಗಾರಪ್ಪ ವಾಗ್ದಾಳಿ

ಬಿಜೆಪಿ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:32 IST
Last Updated 11 ಆಗಸ್ಟ್ 2022, 4:32 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುತ್ತಾರೆ. ಆದರೆ ರಾಷ್ಟ್ರಧ್ವಜಕ್ಕೆ ಹಣ ಪಡೆಯುತ್ತಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ರಾಷ್ಟ್ರಧ್ವಜವನ್ನು, ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೊರಟಿದ್ದ ಬಿಜೆಪಿಯವರು, ಜನರು ನಮ್ಮನ್ನೇ ಬದಲಾಯಿಸುತ್ತಾರೆ ಎಂದು ಗೊತ್ತಾದ ನಂತರ ಹರ್‌ ಘರ್‌ ತಿರಂಗಾ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸ್ವಾತಂತ್ರ್ಯ ಹೋರಾಟಕ್ಕೆ ಏನೊಂದೂ ಕೊಡುಗೆ ನೀಡದ, ಖಾಸಗೀಕರಣದ ಮೂಲಕ
ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ ಬಿಜೆಪಿಯವರಿಗೆ ರಾಷ್ಟ್ರಧ್ವಜದ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮಹಾತ್ಮ ಗಾಂಧೀಜಿ, ಕಾಂಗ್ರೆಸ್‌ನ ಹೋರಾಟದ ಫಲವಾಗಿ ಬಿಜೆಪಿಯವರಿಗೆ ಇಂದು ಧ್ವಜ ಹಿಡಿಯುವ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಹೇಳಿದರು.

ADVERTISEMENT

75ನೇ→ಸ್ವಾತಂತ್ರ್ಯೋತ್ಸವ ದೇಶದಲ್ಲಿ ಬಿಜೆಪಿ ವಿರುದ್ಧ ಎರಡನೇ ಸ್ವಾತಂತ್ರ್ಯ→ಸಂಗ್ರಾಮಕ್ಕೆ→ಮುನ್ನುಡಿ→ಬರೆಯಲಿದೆ. ಬ್ರಿಟಿಷರ ನಂತರಬಿಜೆಪಿ ವಿರುದ್ಧದ ಹೋರಾಟದ ಎರಡನೇ ಅಧ್ಯಾಯ ದೇಶದ ಜನರಿಂದ ಆರಂಭವಾಗಲಿದೆ ಎಂದರು.

ಪರಿಹಾರ ಕೊಡದಂತೆಸೂಚನೆ: ‘ಮಳೆಯಿಂದ ಬಿದ್ದ ಮನೆಗೆ ₹5 ಲಕ್ಷ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ‘ಆ ಮನೆ ಮಾಲೀಕರೇ ಪರಿಹಾರ ಪಡೆಯಲು ಬೇಕೆಂದೇ ಮನೆ ಕೆಡವಿಕೊಂಡಿದ್ದಾರೆ.
ಅವರಿಗೆ ಪರಿಹಾರ ಕೊಡಬೇಡಿ’
ಎಂದು ಜನಪ್ರತಿನಿಧಿಗಳೇ ಅಧಿಕಾರಿಗಳಿಗೆ ಹೇಳುವ ಅಮಾನವೀಯ ಕೆಲಸ ಸೊರಬ ತಾಲ್ಲೂಕಿನ ಜಡೆ ಭಾಗದಲ್ಲಿ ನಡೆದಿದೆ’ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಿಜವಾಗಲೂ ಮನೆ ಬಿದ್ದಿದ್ದರೆ ಫಲಾನುಭವಿಗೆ ನ್ಯಾಯಯುತ ಪರಿಹಾರ ಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕೋವಿಡ್‌ನಿಂದ ಸತ್ತವರ ಕುಟುಂಬದವರಿಗೆ ಪರಿಹಾರ ಕೊಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವುದಾಗಿ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ಈರಮ್ಮ ಎಂಬ ಮಹಿಳೆ ಕೋವಿಡ್‌ನಿಂದ ಸತ್ತಿರುವ ಬಗ್ಗೆ ವೈದ್ಯರು ಪ್ರಮಾಣಪತ್ರ ಕೊಟ್ಟರೂ, ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಪರಿಹಾರ ಕೊಟ್ಟಿಲ್ಲ. ಸೊರಬದಲ್ಲಿಯೇ 18ರಿಂದ 20 ಇಂತಹ ಪ್ರಕರಣ ಇವೆ. ನನ್ನ ಬಳಿಯೇ ಎರಡು ಪ್ರಕರಣಗಳು ಬಂದಿವೆ ಎಂದು ದಾಖಲೆ ಪ್ರದರ್ಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಡಾ. ಶ್ರೀನಿವಾಸ ಕರಿಯಣ್ಣ, ರಮೇಶ್ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಎನ್. ರಮೇಶ್, ಕಲಗೋಡು ರತ್ನಾಕರ್, ಉದಯಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.