ADVERTISEMENT

ಬೆಳಿಗ್ಗೆ 6ಕ್ಕೇ ಎದ್ದು ತೋಟ ಸುತ್ತಿದ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:15 IST
Last Updated 24 ಏಪ್ರಿಲ್ 2019, 20:15 IST
ಸೊರಬ ತಾಲ್ಲೂಕು ಕುಬಟೂರಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ
ಸೊರಬ ತಾಲ್ಲೂಕು ಕುಬಟೂರಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ   

ಶಿವಮೊಗ್ಗ:ಆರು ವಾರಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ, ಪಟ್ಟಣ, ನಗರಗಳನ್ನು ಸುತ್ತಿದ್ದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಬುಧವಾರ ಕುಬಟೂರು ಮನೆಯಲ್ಲಿ ಆರಾಮಾಗಿ ಕಾಲ ಕಳೆದರು.

ಬೆಳಿಗ್ಗೆ 6.05ಕ್ಕೆ ಎದ್ದು ಮುಖ ತೊಳೆದು ಚಹ ಸೇವಿಸಿದ ನಂತರ ಒಂದೂವರೆ ತಾಸು ಅಡಿಕೆ ತೋಟ ಸುತ್ತಿ ಬಂದರು. ಅಷ್ಟರಲ್ಲಿ ಊರ ಜನರು ಬಂದು ನೆರೆದಿದ್ದರು. ಅವರನ್ನೆಲ್ಲ ಖುಷಿಯಾಗಿ ಮಾತನಾಡಿಸಿದರು. ನಂತರ ಉಪಾಹಾರ ಸೇವಿಸಿದರು. ಮನೆಯ ಹಿಂಭಾಗದ ಉದ್ಯಾನದ ಗಿಡ, ಮರಗಳಿಗೆ ನೀರೆರೆದರು. ಕುಟುಂಬದವರ ಜತೆ ಕಾಲ ಕಳೆದರು. ದಿನಪತ್ರಿಕೆಗಳನ್ನು ತಿರುವಿ ಹಾಕಿದರು.

11ರ ನಂತರ ಶಿವಮೊಗ್ಗಕ್ಕೆ ಹೊರಟು ಚುನಾವಣಾ ಆಗುಹೋಗುಗಳ ಕುರಿತು ಪತ್ರಕರ್ತರ ಜತೆ ಸಂವಾದ ನಡೆಸಿದರು. ಶಿವಮೊಗ್ಗ ಕೆಎಚ್‌ಬಿ ಕಾಲೊನಿಯ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ನಂತರ ಮುಖ್ಯಮಂತ್ರಿ ಭೇಟಿ ಮಾಡಲು ಬೆಂಗಳೂರಿನತ್ತ ಪಯಣ ಬೆಳೆಸಿದರು.

ADVERTISEMENT

‘ಮತದಾನ ಮುಗಿದ ನಂತರ ಕುಬಟೂರಿನ ಮನೆಯಲ್ಲೇ ಇದ್ದೆ. ನೂರಾರು ಜನರು ಬಂದು ಮಾತನಾಡಿಸಿಕೊಂಡು ಹೋದರು. ನಿತ್ಯವೂ ಮಧ್ಯರಾತ್ರಿ 12ರ ನಂತರ ಮಲಗಿ ಅಭ್ಯಾಸವಾಗಿತ್ತು. ಮಂಗಳವಾರ ರಾತ್ರಿ 10.45ಕ್ಕೆ ಮಲಗಿದೆ. ಇನ್ನೂ ಮೂರ್‍ನಾಲ್ಕು ದಿನ ವಿಶ್ರಾಂತಿ ಪಡೆಯುವೆ. ಏ. 28 ಪುತ್ರ ಸೂರ್ಯನ ಜನುಮ ದಿನ. ಅಲ್ಲಿಯವರೆಗೂ ಕುಟುಂಬದ ಜತೆ ಕಾಲ ಕಳೆಯುವೆ. ಸಹೋದರಿಯರಾದ ಗೀತಾ, ಸುಜಾತಾ, ಅನಿತಾ ಅವರನ್ನು ಭೇಟಿ ಮಾಡುವೆ. ಆಮೇಲೆ ಕಾಂಗ್ರೆಸ್, ಜೆಡಿಎಸ್‌ ಮುಖಂಡರ ಜತೆ ಚರ್ಚಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರ ಕೃತಜ್ಞತಾ ಸಭೆ ಆಯೋಜಿಸುವೆ ’ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.