ADVERTISEMENT

ಜೋಗದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಲ್ ಸಂಸ್ಕೃತಿ ನಿರ್ಮಾಣ: ಆರೋಪ

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಲಿವಿಂಗ್ ಅರ್ಥ್ ಫೌಂಡೇಷನ್ ಸಂಸ್ಥೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 3:47 IST
Last Updated 5 ಮಾರ್ಚ್ 2022, 3:47 IST
ರಜನಿ ಜಿ.ರಾವ್
ರಜನಿ ಜಿ.ರಾವ್   

ಸಾಗರ: ಜೀವವೈವಿಧ್ಯಗಳ ಅಪರೂಪದ ತಾಣವಾಗಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿನ ಜೋಗ್ ಫಾಲ್ಸ್‌ನಲ್ಲಿ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ನಗರ ಕೇಂದ್ರಿತ ಮಾದರಿಯ ಮಾಲ್ ಸಂಸ್ಕೃತಿಯನ್ನು ನಿರ್ಮಿಸಲು ಹೊರಟಿದೆ ಎಂದು ಬೆಂಗಳೂರಿನ ಲಿವಿಂಗ್ ಅರ್ಥ್ ಫೌಂಡೇಷನ್ ಸಂಸ್ಥೆಯ ಪ್ರಮುಖರಾದ ರಜನಿ ಜಿ.ರಾವ್ ದೂರಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಪಾರಂಪರಿಕ ತಾಣವೂ ಆಗಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ಆವರಣವನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಮುಂದಾಗಿರುವ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕಾಮಗಾರಿಗಳ ಅನುಷ್ಠಾನವನ್ನು ಕಾನೂನುಬಾಹಿರ ವಾಗಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.

ನಮ್ಮ ಸಂಸ್ಥೆ ಜೋಗದ ಪರಿಸರಕ್ಕೆ ಬಂದು ನಡೆಸಿರುವ ಅಧ್ಯಯನ ಹಾಗೂ ಸಂಗ್ರಹಿಸಿರುವ ಮಾಹಿತಿಯಂತೆ ಪ್ರಸ್ತುತ ಜೋಗದ ಸುತ್ತಮುತ್ತ ಒಟ್ಟು ₹ 700 ಕೋಟಿ ವೆಚ್ಚದಲ್ಲಿ 28 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಆದರೆ ಈ ಕಾಮಗಾರಿಗಳ ಸ್ವರೂಪ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಸ್ಥಳೀಯರ ಜೊತೆ ಸಮಾಲೋಚನೆಯನ್ನೆ ನಡೆಸಿಲ್ಲ ಎಂದು ಅವರು ದೂರಿದರು.

ADVERTISEMENT

ಜೋಗದ ಸುತ್ತಮುತ್ತ ಜಿಪ್ ಲೈನ್, ರೋಪ್ ವೇ, ಪಂಚತಾರಾ ಹೋಟೆಲ್, ಮಾಹಿತಿ ಕೇಂದ್ರ, ಪ್ರವೇಶ ದ್ವಾರ, ಈಜುಕೊಳ, ಸಂಗೀತ ಕಾರಂಜಿ ಸೇರಿದಂತೆ ಹಲವು ಕಾಮಗಾರಿಗಳನ್ನು ತರಾತುರಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಗಳ ವಿವರ ನೀಡುವಂತೆ ಮಾಹಿತಿ ಕೇಳಿದರೆ ಅದು ಬೌದ್ಧಿಕ ಆಸ್ತಿಗಳ ವ್ಯಾಪ್ತಿಗೆ ಬರುತ್ತದೆ ಎನ್ನುವ ಕಾರಣ ನೀಡಿ ಮಾಹಿತಿ ನಿರಾಕರಿಸಲಾಗುತ್ತಿದೆ ಎಂದರು.

ಜೋಗ್ ಫಾಲ್ಸ್ ಬಳಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ ಈಗ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರದ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ ಹಾಕಲಾಗುತ್ತಿದೆ. ವಾಹನಗಳ ಪಾರ್ಕಿಂಗ್ ಸಲುವಾಗಿಯೆ ಎಕರೆಗಟ್ಟಲೆ ಪ್ರದೇಶವನ್ನು ಮೀಸಲಿಡಲಾಗಿದೆ. ಸಾರ್ವಜನಿಕರ ಹಣ ಯಾವ ರೀತಿ ಬಳಕೆಯಾಗುತ್ತದೆ ಎನ್ನುವ ಬಗ್ಗೆ ಜನರಿಗೆ ಮಾಹಿತಿ ನೀಡುವ ಕನಿಷ್ಠ ಸೌಜನ್ಯವನ್ನು ಸಂಬಂಧಪಟ್ಟ ಇಲಾಖೆ ತೋರುತ್ತಿಲ್ಲ ಎಂದು ದೂರಿದರು.

2020ನೇ ಸಾಲಿನಲ್ಲಿ ಜೋಗ್ ಫಾಲ್ಸ್ ನ ಬ್ರಿಟಿಷ್ ಬಂಗಲೆ ಹಿಂಭಾಗದ ಗುಡ್ಡ ಕುಸಿದಿದ್ದು ಅಪಾಯದ ಮುನ್ಸೂಚನೆ ದೊರಕಿದೆ. ಜೋಗದ ಜಲಪಾತ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದರೂ ಇಲಾಖೆಯಿಂದ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಜೋಗಕ್ಕೆ ಬರುವ ಪ್ರವಾಸಿಗರು ಪ್ರತಿಯೊಂದಕ್ಕೂ ಹಣ ನೀಡಲೇಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಪರಿಸರಸೂಕ್ಷ್ಮ ಪ್ರದೇಶವಾಗಿರುವ ಜೋಗದಲ್ಲಿ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಈ ಸಂಬಂಧ ತಜ್ಞರು, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಸ್ಥಳೀಯ ಪಟ್ಟಣ ಪಂಚಾಯಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಶರಾವತಿ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಲ್ಲಿ ಜೋಗ ಜಲಪಾತ ಪ್ರದೇಶ ಬರುತ್ತದೆ. ಆದಾಗ್ಯೂ ಇಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಜಲಪಾತವೇ ಕುಸಿಯುವ ಅಪಾಯವಿದೆ ಎಂದು ಎಚ್ಚರಿಸಿದರು.

ಜಲಪಾತ ವೀಕ್ಷಣೆಗೆ ಜಿಪ್ ಲೈನ್ ನಿರ್ಮಿಸಲು ಮುಂದಾಗಿರುವ ಶರಾವತಿ ಕಣಿವೆ ಪ್ರದೇಶದಲ್ಲಿ ಅಪರೂಪದ ಸಂತತಿಯ ಹಕ್ಕಿಗಳು ವಾಸವಾಗಿವೆ. ಇಲ್ಲಿನ ಪರಿಸರಕ್ಕೆ ಧಕ್ಕೆಯಾದರೆ ಜೀವವೈವಿಧ್ಯ ನಾಶವಾಗುವುದು ಖಚಿತ. ಒಟ್ಟಾರೆಯಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಭವಿಷ್ಯದಲ್ಲಿ ಜೋಗ ಜಲಪಾತವನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಲೀವಿಂಗ್ ಅರ್ಥ್ ಫೌಂಡೇಷನ್ ಸಂಸ್ಥೆಯ ಸಂಧ್ಯಾ, ಜೋಗ ಜಲಪಾತದ ವೀಕ್ಷಣೆಗೆ ಬರುವ ಹೆಚ್ಚಿನ ಜನರು ಇಲ್ಲಿ ಹಸಿರು ತುಂಬಿಕೊಂಡಿರುವ ಪರಿಸರವನ್ನು ಆಸ್ವಾದಿಸಲು ಬಯಸುತ್ತಾರೆ. ಇಲ್ಲಿ ನಗರದ ಮಾದರಿಯ ಮಾಲ್ ಸಂಸ್ಕೃತಿ ನಿರ್ಮಾಣವಾದರೆ ಯಾವ ಪ್ರವಾಸಿಗರೂ ಭವಿಷ್ಯದಲ್ಲಿ ಜೋಗವನ್ನು ಇಷ್ಟಪಡುವುದಿಲ್ಲ ಎಂದರು.

ಪ್ರವಾಸೋದ್ಯಮ ಬೆಳವಣಿಗೆ ಯಾದರೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ ಎಂದು ನಂಬಿಸಲಾಗುತ್ತಿದೆ. ಆದರೆ ಈಗ ಜೋಗದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿಯ ಮಾದರಿ ಗಮನಿಸಿದರೆ ಸ್ಥಳೀಯರಿಗೆ ಉದ್ಯೋಗ ದೊರಕುವ ಅಥವಾ ಲಾಭವಾಗುವ ಯಾವ ಅಂಶವೂ ಇಲ್ಲವಾಗಿದೆ. ಬದಲಾಗಿ ಇರುವ ಉದ್ಯೋಗ, ಸೌಲಭ್ಯವೂ ನಾಶವಾಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.