ADVERTISEMENT

ಸುಪ್ರೀಂ ಆದೇಶದಂತೆ ಬಡ್ತಿ: ಅಹಿಂಸಾ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 11:06 IST
Last Updated 11 ಅಕ್ಟೋಬರ್ 2018, 11:06 IST

ಶಿವಮೊಗ್ಗ: ರಾಜ್ಯ ಸರ್ಕಾರ ವಿಳಂಬ ಮಾಡದೆ ಸುಪ್ರೀಂಕೋರ್ಟ್‌ ಆದೇಶದಂತೆ ಬಡ್ತಿನೀಡಬೇಕುಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಸೇವಾ ನಿರತ ನೌಕರರ ಹಿತರಕ್ಷಣಾ ಒಕ್ಕೂಟದ ಸದಸ್ಯರು (ಅಹಿಂಸಾ ವೇದಿಕೆ) ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಡ್ತಿಯಲ್ಲೂ ಪರಿಶಿಷ್ಟ ಜಾತಿ, ವರ್ಗದವರಿಗೆ ಮೀಸಲಾತಿ ನೀಡಲು 1978ರಲ್ಲಿ ಕಾನೂನು ರೂಪಿಸಲಾಗಿತ್ತು. ಈ ನೀತಿ ಕೆಳಹಂತದ ನೌಕರರಿಂದ ಉನ್ನಾಧಿಕಾರಿಗಳವರೆಗೂ ಅನ್ವಯಿಸಲಾಗಿತ್ತು. ಇದರಿಂದ ಪರಿಶಿಷ್ಟ ಜಾತಿ, ವರ್ಗದವರಿಗೆ ಮಾತ್ರ ಬಡ್ತಿ ಸಿಕದೆ. ಉಳಿದ ಶೇ 82ರಷ್ಟು ವರ್ಗದವರಿಗೆ ಅನ್ಯಾಯವಾಗುತ್ತಾ ಬಂದಿದೆ. ಹಲವು ಬಾರಿ ನ್ಯಾಯಾಂಗ ಹೋರಾಟ ನಡೆಸಲಾಗಿದೆ. ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅಂತಿಮ ಆದೇಶದ ಪ್ರಕಾರ ಬಡ್ತಿಯಲ್ಲಿ ಮೀಸಲಾತಿ ನೀಡಬಾರದು ಎಂದು ಹೇಳಿದೆ. ಜತೆಗೆ, ವೇಗೋತ್ಕರ್ಷ ಜೇಷ್ಠತೆ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಆದೇಶ 6 ತಿಂಗಳ ಒಳಗೆ ಜಾರಿ ಮಾಡುವಂತೆ ಸೂಚಿಸಿದೆ. ಆದರೂ, ಆದೇಶ ನಿಗದಿತ ಅವಧಿಯಲ್ಲಿ ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್‌ ವಿಚಾರಣೆ ನಡೆಸಲು ಕೈಗೆತ್ತಿಕೊಂಡಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಮುಂದುವರಿಯಬೇಕಿದೆ. ಹಾಗಾಗಿ, ಮೀಸಲಾತಿ ಅಡಿ ಬಡ್ತಿ ನೀಡಬಾರದು ಎಂದು ಆಗ್ರಹಿಸಿದರು.

ADVERTISEMENT

ಸಂಘಟನೆ ಮುಖಂಡರಾದ ರವಿಕುಮಾರ್, ಫಣಿರಾವ್, ಆನಂದಮೂರ್ತಿ ಮತ್ತಿತರರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.