ಹೊಸನಗರ ತಾಲ್ಲೂಕಿನ ಮಂಡ್ರೋಳ್ಳಿ ಶಾಲೆ ಆವರಣದಲ್ಲಿ ಬೆಳೆದ ಅಕೇಶಿಯ ಮರಗಳು
ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡ್ರೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೆಟ್ಟು ಬೆಳೆಸಿರುವ ಅಕೇಶಿಯ ಮರಗಳು ಇಂದು ಅಪಾಯಕಾರಿಯಾಗಿ ಪರಿಣಮಿಸಿವೆ. ಮರಗಳು ಗಾಳಿ ಮಳೆಗೆ ಮುರಿದು ಬೀಳುತ್ತಿದ್ದು ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡಬಹುದು ಎಂಬುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಶಾಲಾಭಿವೃದ್ದಿ ಸಮಿತಿ ಸದಸ್ಯರು 20 ವರ್ಷಗಳ ಹಿಂದೆ ಶಾಲೆಯ ಸುತ್ತಮುತ್ತಲಿನ ಆವರಣದಲ್ಲಿ 500ಕ್ಕೂ ಹೆಚ್ಚು ಅಕೇಶಿಯ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಬೆಳೆದಿರುವ ಮರಗಳು ಮಳೆ, ಗಾಳಿಗೆ ಮುರಿದು ಮುರಿದು ಬಿದ್ದು ಕೊಠಡಿಗಳು ಹಾನಿಗೊಳಗಾಗಿವೆ. ಕಾಂಪೌಂಡ್ ಕುಸಿದಿದೆ. ನಿತ್ಯವೂ ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು– ಶಿಕ್ಷಕರು ಓಡಾಟ ನಡೆಸಬೇಕಿದೆ.
ಅಕೇಶಿಯ ಮರಗಳ ಕಟಾವಿಗೆ ಅರಣ್ಯ ಇಲಾಖೆ ಪರವಾನಿಗೆ ಅಗತ್ಯ. ಆದರೆ, ಇಲಾಖೆ ಇತ್ತ ಗಮನ ಹರಿಸಿಲ್ಲ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರಗಳ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆ ಸುಮ್ಮನಿದೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಹಲವು ಬಾರಿ ಮರಗಳ ಕಡಿತಲೆಗೆ ನಗರ ಅರಣ್ಯ ಇಲಾಖೆ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಶಾಲಾ ಆಡಳಿತ ವರ್ಗ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಈ ಹಿಂದೆ ತೀರ್ಥಹಳ್ಳಿ ಹಾಗೂ ಸಾಗರ ಶಾಸಕರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಈ ಶಾಲೆಯಲ್ಲಿನ ಮರಗಳ ಕಟಾವು ಬಗ್ಗೆ ವಿಷಯ ಪ್ರಸ್ತಾಪವಾಗಿ, ಶಾಸಕ ಆರಗ ಜ್ಞಾನೇಂದ್ರ ಅವರು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆದರೆ ಅವರ ಸೂಚನೆಗೆ ಅರಣ್ಯ ಇಲಾಖೆ ಸೊಪ್ಪು ಹಾಕಿಲ್ಲ ಎಂಬುದು ಗ್ರಾಮಸ್ಥರ ದೂರು.
ಮಂಡ್ರೊಳ್ಳಿ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶಾಲೆಯ ಆವರಣದಲ್ಲಿನ 500 ಅಕೇಶಿಯ ಮರಗಳ ಪೈಕಿ ಕನಿಷ್ಠ 200 ಮರಗಳ ತೆರವಿಗೆ ಕ್ರಮ ಕೈಗೊಂಡಲ್ಲಿ ಸಂಭವನೀಯ ಅವಘಡ ತಪ್ಪಿಸಬಹುದು ಎಂಬುದು ಪಾಲಕರ ಅಗ್ರಹ. ಶಾಲೆಯ ಮುಂಭಾಗದಲ್ಲೆ 11 ಕೆವಿ ವಿದ್ಯುತ್ ಕಂಬಗಳಿವೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದರೆ ಭಾರೀ ಅನಾಹುತ ಆಗುತ್ತದೆ ಎಂಬುದೂ ಅವರ ಅಳಲು.
ಶಾಲೆ ಆವರಣದಲ್ಲಿ ಬೆಳೆದು ನಿಂತ ಅಕೇಶಿಯ ಮರಗಳ ಕಡಿತಲೆಗೆ ಈಗಾಗಲೇ ಹಲವು ಬಾರಿ ಶಾಸಕ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದ್ದೇವೆ. ನಗರ ವಲಯ ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲಪುಟ್ಟಪ್ಪ. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ
ಶಾಲೆಗೆ 2.16 ಗುಂಟೆ ಜಮೀನು ಮಂಜೂರಾಗಿದೆ. ಎರಡು ದಶಕಗಳ ಹಿಂದೆ ನೆಟ್ಟು ಬೆಳಸಿದ್ದ ಸುಮಾರು 500ಕ್ಕೂ ಹೆಚ್ಚು ಅಕೇಶಿಯ ಮರಗಳು ಕಾಂಪೌಂಡಿಗೆ ಹಾನಿ ಉಂಟುಮಾಡಿವೆ. ಕಡಿತಲೆಗೆ ಅರಣ್ಯ ಇಲಾಖೆ ಮೀನ– ಮೇಷ ಎಣಿಸುತ್ತಿದೆ.ತಿಮ್ಮಪ್ಪ ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.