ADVERTISEMENT

ಸಚಿವರ ಆಪ್ತರ ಹಗಲು ದರೋಡೆಯ ತನಿಖೆಯಾಗಲಿ: ಮಂಜುನಾಥ ಗೌಡ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:40 IST
Last Updated 6 ಮೇ 2022, 4:40 IST
ಆರ್‌.ಎಂ. ಮಂಜುನಾಥ ಗೌಡ
ಆರ್‌.ಎಂ. ಮಂಜುನಾಥ ಗೌಡ   

ತೀರ್ಥಹಳ್ಳಿ: ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಪುಸ್ತಕ ಈಗಷ್ಟೇ ಬಯಲಿಗೆ ಬಂದಿದೆ. ಇನ್ನಷ್ಟು ಭ್ರಷ್ಟಾಚಾರ ತೆರೆಗೆ ರಾಜ್ಯ ಕಾಂಗ್ರೆಸ್‌ ಸನ್ನದ್ಧವಾಗಿದೆ ಎಂದು ಕಾಂಗ್ರೆಸ್‌ ಮುಖಂಡ, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.

ಸರ್ವಾಧಿಕಾರಿ ಧೋರಣೆಯಿಂದ ಗೃಹಸಚಿವರ ಆಪ್ತರು ದರೋಡೆಗಿಳಿದರೂ ಪೊಲೀಸ್‌ ಇಲಾಖೆ ಮೌನವಹಿಸಿದೆ ಎಂದು ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ, ಸಚಿವ ಆರಗ ಜ್ಞಾನೇಂದ್ರ ಅವರು ಹಗರಣ ಆರೋಪದ ನೈತಿಕ ಹೊಣೆ ಹೊರಬೇಕು. ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಮೇ 10ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸುವರು’ ಎಂದು ತಿಳಿಸಿದರು.

ADVERTISEMENT

ಮೇ 6ರಿಂದ 10ರ ವರಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಮಾತನಾಡಲು ಅವರು ನಿರಾಕರಿಸಿದರು.

ಬಿಜೆಪಿಯೇತರ ಕಾರ್ಯಕರ್ತರು ಕ್ಷೇತ್ರದಲ್ಲಿ ಬದುಕುವ ಹಾಗಿಲ್ಲ. ಮಂಡಗದ್ದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜುಲ್ಫೀಕರ್‌ ಮನೆಯ ಮೇಲೆ ಗೃಹ ಇಲಾಖೆ ಆಣತಿಯಂತೆ ರಂಜಾನ್‌ ಹಬ್ಬದ ರಾತ್ರಿ ದಾಳಿ ನಡೆಸಲಾಗಿದೆ. ಮಹಿಳೆಯರು ಇದ್ದ ಮನೆಯಲ್ಲಿ ಮಹಿಳಾ ಸಿಬ್ಬಂದಿ ಇಲ್ಲದೆ ಶೋಧ ನಡೆಸಿದ್ದಾರೆ. ಯಾವುದೇ ಪ್ರಕರಣದಲ್ಲಿ ಭಾಗಿಯಾಗದೆ ಸನ್ನಡತೆಯಿಂದ ಬದುಕುತ್ತಿರುವ ವ್ಯಕ್ತಿಯ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯ, ಸಮಾನತೆ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲಾಗಿದೆ. ಎಲ್ಲಾ ಅಸ್ತ್ರಗಳು ತಿರುಗು ಬಾಣವಾಗಿ ಸರ್ಕಾರಕ್ಕೆ ಅಡ್ಡಗಾಲಾಗಲಿದೆ. ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯಿಂದ ಮನೆಯಲ್ಲಿ ಪೆಟ್ರೋಲ್‌ ದರಪಟ್ಟಿ ಮಾಹಿತಿ ಇದ್ದರೂ ಬಂಕ್‌ನಲ್ಲೇ ಪರಿಷ್ಕೃತ ದರ ನೋಡುವ ದುಃಸ್ಥಿತಿಯಲ್ಲಿ ದೇಶ ಇದೆ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯೆ ಸುಶೀಲಾ ಶೆಟ್ಟಿ, ಕಾಂಗ್ರೆಸ್‌ ಮುಖಂಡರಾದ ಡಾ.ಟಿ.ಎಲ್.‌ ಸುಂದರೇಶ್‌, ಕೃಷ್ಣಮೂರ್ತಿ ಭಟ್‌, ಕಟ್ಟೇಹಕ್ಕಲು ಕಿರಣ್‌, ಜೀನಾ ವಿಕ್ಟರ್‌, ಸಚೀಂದ್ರ ಹೆಗಡೆ, ಅಮೀರ್‌ ಹಂಜಾ, ಕರಿಮನೆ ಮಧುಕರ್‌, ರಫೀಕ್‌, ಆಸಿಫ್‌, ನಾಗರಾಜ್‌ ಕುರುವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.