ಎಂ. ನವೀನ್ ಕುಮಾರ್
ವಾಡಿಕೆಯಂತೆ ಜೂನ್‍ನಲ್ಲಿ ರಾಜ್ಯ ಪ್ರವೇಶಿಸಬೇಕಿದ್ದ ಮುಂಗಾರು ವಿಳಂಬವಾಗಿದೆ. ಪರಿಣಾಮವಾಗಿ ತೋಟಗಳಲ್ಲಿ ಅಡಿಕೆ ತೆನೆ ಹರಳು ಉದುರುತ್ತಿವೆ. ರೈತರು ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡಿಕೊಂಡು ಆಕಾಶದತ್ತ ಮುಖಮಾಡಿ ನಿಂತಿದ್ದಾರೆ.
ಶಿರಾಳಕೊಪ್ಪ: ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಈ ಭಾಗದ ಶೇ 50ಕ್ಕಿಂತ ಹೆಚ್ಚು ಕೊಳವೆಬಾವಿಗಳು ಬರಿದಾಗಿದ್ದು ರೈತರು ಆತಂಕಕ್ಕಿಡಾಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ವಾಡಿಕೆಯಂತೆ ಜೂನ್‍ನಲ್ಲಿ ರಾಜ್ಯ ಪ್ರವೇಶಿಸಬೇಕಿದ್ದ ಮುಂಗಾರು ವಿಳಂಬವಾಗಿದೆ. ಪರಿಣಾಮವಾಗಿ ತೋಟಗಳಲ್ಲಿ ಅಡಿಕೆ ತೆನೆ ಹರಳು ಉದುರುತ್ತಿವೆ. ರೈತರು ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡಿಕೊಂಡು ಆಕಾಶದತ್ತ ಮುಖಮಾಡಿ ನಿಂತಿದ್ದಾರೆ.
3,600 ಹೆಕ್ಟೇರ್ ಭತ್ತ, 3,000 ಹೆಕ್ಟೇರ್ ಮುಸುಕಿನ ಜೋಳ, 150 ಹೆಕ್ಟೇರ್ ಹೆಸರು, 250 ಹೆಕ್ಟೇರ್ ಅಲಸಂದಿ, 75 ಹೆಕ್ಟೇರ್ ಶೇಂಗಾ, 850 ಹೆಕ್ಟೇರ್ ಸೂರ್ಯಕಾಂತಿಯನ್ನು ಬೆಸಿಗೆಯಲ್ಲಿ ಬೆಳೆಯಲಾಗಿತ್ತು. ಅತೀ ಹೆಚ್ಚು ನೀರನ್ನು ಬಯಸುವ ಭತ್ತ, ಮುಸುಕಿನ ಜೋಳ ಕಟಾವು ಮಾಡಲಾಗಿದ್ದು, ದೀರ್ಘಕಾಲದ ಬೆಳೆಯಾದ ಅಡಿಕೆಗೆ ನೀರು ಒದಗಿಸುವುದು ರೈತರಿಗೆ ಸವಾಲಾಗಿದೆ.
ಮಳೆಯಾಗದಿದ್ದರೆ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲೂ ಸಾಕಷ್ಟು ವ್ಯತ್ಯಯವಾಗಲಿದೆ. ಅಂಜನಾಪುರ ಜಲಾಶಯದಿಂದ ಈಗಾಗಲೇ ಸಮರ್ಪಕವಾಗಿ ನೀರು ಸರಬರಾಜು ಆಗದ ಕಾರಣ ಸದ್ಯ 2ರಿಂದ 3 ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಮಳೆ ಬಾರದಿದ್ದರೆ ಮುಂದಿನ ವಾರದಿಂದ ವಾರಕ್ಕೆ ಒಮ್ಮೆ ನೀರು ಪೂರೈಸುವುದು ಅನಿವಾರ್ಯವಾಗಲಿದೆ.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲವು ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ₹ 25 ಲಕ್ಷಕ್ಕೂ ಹೆಚ್ಚು ನೀರಿನ ಕರ ಬಾಕಿ ಇದ್ದು ಜನರು ಅದನ್ನು ತಪ್ಪದೇ ಪಾವತಿಸಬೇಕು.ಹೇಮಂತ್ ಡೊಳ್ಳೆ, ಪುರಸಭೆ ಮುಖ್ಯಾಧಿಕಾರಿ
‘ಮುಂಗಾರುಪೂರ್ವ ಅಡ್ಡಮಳೆ, ಚಂಡಮಾರುತ ಸೇರಿ ಯಾವುದಾದರೂ ನೆಪದಲ್ಲಿ ಬೇಸಿಗೆಯಲ್ಲಿ ಒಂದು ಮಳೆ ಬರುತ್ತಿತ್ತು. ಈಗ, ಇಷ್ಟು ದೀರ್ಘ ಅವಧಿಯಲ್ಲಿ ಮಳೆಯಾಗದಿರುವುದು ಆತಂಕದ ವಿಷಯ. ತಾಳಗುಂದ, ಉಡುಗಣಿ ಹೋಬಳಿ ಏತ ನೀರಾವರಿಯಿಂದಾಗಿ ಕೆರೆಗಳಲ್ಲಿ ಸ್ವಲ್ಪವೇ ನೀರು ಇದ್ದು, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿದೆ’ ಎಂದು ಕೃಷಿಕ ಸಮಾಜದ ಚನ್ನವೀರಪ್ಪ ತಿಳಿಸಿದರು.
‘ಕಳೆದ ಅಕ್ಟೋಬರ್ ತಿಂಗಳಿನಿಂದ ಈಚೆಗೆ ಹದ ಮಳೆಯಾಗಿಲ್ಲ. ಈ ಹಿಂದೆ ತಿಂಗಳಿಗೆ ಒಂದಾದರೂ ಮಳೆ ಆಗುತ್ತಿತ್ತು. ಶ್ರೀಮಂತ ರೈತರು ಬಿತ್ತನೆ ಬೀಜ, ಗೊಬ್ಬರ ಒಯ್ಯುತ್ತಿದ್ದಾರೆ. ಆದರೆ, ಸಣ್ಣ ರೈತರು ಮಳೆಯಾಗುವುದನ್ನೇ ಎದುರು ನೋಡುತ್ತಿದ್ದಾರೆ’ ಎಂದು ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಸುರಹೊನ್ನೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.