ADVERTISEMENT

ಒಬ್ಬ ಶಾಸಕರೂ ಇರದ ಮರಾಠರಿಗೆ ಪ್ರಾಧಿಕಾರ ಏಕೆ ಬೇಡ?

ಕ್ಷತ್ರೀಯ ಮರಾಠ ಮೀಸಲಾತಿ ಅಭಿಯಾನದ ಅಧ್ಯಕ್ಷ ಪಿ.ವಿಜೇಂದ್ರ ಜಾಧವ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:50 IST
Last Updated 6 ಫೆಬ್ರುವರಿ 2021, 11:50 IST

ಶಿವಮೊಗ್ಗ: ರಾಜ್ಯದ 32 ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಒಬ್ಬರೂ ಶಾಸಕರಾಗಿಲ್ಲ. ರಾಜಕೀಯ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಪ್ರಾಧಿಕಾರ ರಚನೆ ಮಾಡಿದರೆ ಕನ್ನಡ ನಾಡಿಗೆ ಯಾವ ಅನ್ಯಾಯವಾಗುತ್ತದೆ ಎಂದು ಕ್ಷತ್ರೀಯ ಮರಾಠ ಮೀಸಲಾತಿ ಅಭಿಯಾನದ ಅಧ್ಯಕ್ಷ ಪಿ.ವಿಜೇಂದ್ರ ಜಾಧವ್ ಪ್ರಶ್ನಿಸಿದರು.

ಬೆಳಗಾವಿ ಕರ್ನಾಟಕದ ಭಾಗ. ರಾಜ್ಯದ ಯಾವ ಮರಾಠರಿಗೂ ತಕರಾರು ಇಲ್ಲ. ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರು ಕನ್ನಡಿಗರೇ ಆಗಿದ್ದಾರೆ. ಆದರೆ, ಮರಾಠ ಪ್ರಾಧಿಕಾರ ರಚನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.ಮರಾಠ ಪ್ರಾಧಿಕಾರದ ರಚನೆಗೆ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮರಾಠಿಗರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಪ್ರವರ್ಗ 2-ಎಗೆ ಸೇರಿಸಲು ಶಿಫಾರಸು ಮಾಡಲಾಗಿದೆ. ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ರಾಜಕೀಯ, ಆರ್ಥಿಕವಾಗಿ ಬೆಳವಣಿಗೆ ಕಂಡಿಲ್ಲ. ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಸಂಘಟನೆಗಳು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದರು.

ADVERTISEMENT

ಮರಾಠಿಗರನ್ನು ನಾಡ ದ್ರೋಹಿಗಳು ಎಂದು ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಕನ್ನಡ ನಾಡಿನಲ್ಲೇ ಇದ್ದೇವೆ. ಕನ್ನಡ ಭಾಷೆಯನ್ನೇ ಮಾತನಾಡುತ್ತಿದ್ದೇವೆ. ಮರಾಠಿಗರು ಉನ್ನತ ಉದ್ಯೋಗದಲ್ಲೂ ಇಲ್ಲ, ರಾಜಕಾರಣಿಗಳೂ ಆಗಿಲ್ಲ. ಬಹುತೇಕರು ಕೂಲಿ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಂದ್ರುರಾವ್ ಗಾರ್ಗೆ, ಭವಾನಿರಾವ್ ಮೋರೆ, ರಮೇಶ್‌ಬಾಬು ಜಾಧವ್, ದಿನೇಶ್ ಚೌಹ್ವಾಣ್, ಚೂಡಾಮಣಿ ಪವಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.