ADVERTISEMENT

ಶಿಕಾರಿಪುರ: ‘ಮಂತ್ರ ಮಾಂಗಲ್ಯ ಸಮಾಜಕ್ಕೆ ಮಾದರಿಯಾಗಲಿ’

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:27 IST
Last Updated 24 ಮೇ 2025, 13:27 IST
ಶಿಕಾರಿಪುರದಲ್ಲಿ ಶುಕ್ರವಾರ ನಿತ್ಯೋತ್ಸವ ಟ್ರಸ್ಟ್ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 21 ಜೋಡಿ ಮದುವೆ ನಡೆಸಲಾಯಿತು 
ಶಿಕಾರಿಪುರದಲ್ಲಿ ಶುಕ್ರವಾರ ನಿತ್ಯೋತ್ಸವ ಟ್ರಸ್ಟ್ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 21 ಜೋಡಿ ಮದುವೆ ನಡೆಸಲಾಯಿತು    

ಶಿಕಾರಿಪುರ: ‘ಜನರು ವಿವಾಹಕ್ಕೆ ಅದ್ಧೂರಿ ವೆಚ್ಚ ಮಾಡುತ್ತಿರುವ ಈ ದಿನಗಳಲ್ಲಿ ಸರಳ ಸಾಮೂಹಿಕ ವಿವಾಹದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಶ್ಲಾಘನೀಯ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ನಿತ್ಯೋತ್ಸವ ಸೇವಾ ಟ್ರಸ್ಟ್, ಶಿವಮೊಗ್ಗದ ಆಶ್ರಿತಾ ಫೌಂಡೇಶನ್, ಗಾಳಿ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ ಅಹಿಂದ ಸಂಘಟನೆ ಆಶ್ರಯದಲ್ಲಿ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮದುವೆಗೆ ದುಂದು ವೆಚ್ಚ ಮಾಡಬಾರದು ಎನ್ನುವ ಕಾರಣಕ್ಕೆ ಆಗಲೆ ಕುವೆಂಪು ಅವರು ಮಂತ್ರ ಮಾಂಗಲ್ಯ ವಿವಾಹ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಮದುವೆ ಹೆಸರಿನಲ್ಲಿ ದುಂದು ವೆಚ್ಚ ಮಾಡುವುದು ಈಚೆಗೆ ಹೆಚ್ಚಾಗಿದೆ ಅದು ಬಡವರು ಮದುವೆ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಸ್ಥಿತಿ ಸಮಾಜದಲ್ಲಿ ನಿರ್ಮಿಸುತ್ತಿದೆ ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ADVERTISEMENT

‘ಮದುವೆ ವೆಚ್ಚ ಭರಿಸಲಾಗದ ಅಹಿಂದ ವರ್ಗಕ್ಕೆ ಸೇರಿದ ಸಾಕಷ್ಟು ಬಡವರು ನಮ್ಮ ನಡುವೆ ಇದ್ದಾರೆ. ಅವರಿಗೆ ಅನುಕೂಲ ಮಾಡುವುದೇ ನಿಜವಾದ ಸೇವೆ ಎನ್ನುವ ಕಾರಣಕ್ಕೆ ಏಳು ವರ್ಷಗಳಿಂದ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಅಂಗವಾಗಿ ಪ್ರತಿವರ್ಷ ಸೇವಾ ಕಾರ್ಯ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ನಿತ್ಯೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಜಗದೀಶ್ ಚುರ್ಚಿಗುಂಡಿ ಹೇಳಿದರು.

21 ಜೋಡಿ ವಧು–ವರರಿಗೆ ಮಂತ್ರ ಮಾಂಗಲ್ಯದ ಮೂಲಕ ಮದುವೆ ಮಾಡಿಸಲಾಯಿತು. ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್‌ ಭಾನು, ಆಶ್ರೀತ ಫೌಂಡೇಶನ್ ಅಧ್ಯಕ್ಷೆ ಬಿ.ಜ್ಯೋತಿ, ಗಾಳಿ ದುರ್ಗಾ ಪರಮೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಹರೀಶ್, ಮುಖಂಡರಾದ ಗೋಣಿ ಮಾಲತೇಶ್, ಎ.ಬಿ.ರಾಮಚಂದ್ರ, ಪುಷ್ಪಾ ಶಿವಕುಮಾರ್, ಶಿವುನಾಯ್ಕ, ಭಂಡಾರಿ ಮಾಲತೇಶ್, ಉಳ್ಳಿ ದರ್ಶನ್, ವಕೀಲ ನಿಂಗಪ್ಪ, ಹನುಮಂತಪ್ಪ, ಪರಮೇಶ್, ಪ್ರಶಾಂತ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.