ADVERTISEMENT

ಸೊರಬ: ಪ್ರೋತ್ಸಾಹಧನದ ನಿರೀಕ್ಷೆಯಲ್ಲಿ ಮೇದಾರರು

ಜೀವನಕ್ಕೆ ಆಸರೆಯಾಗಿರುವ ಕುಲಕಸಬು.. ಬಿದಿರಿನ ಅಲಭ್ಯತೆಯ ಕೊರಗು...

ರಾಘವೇಂದ್ರ ಟಿ.
Published 7 ಮೇ 2024, 6:13 IST
Last Updated 7 ಮೇ 2024, 6:13 IST
ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಬುಟ್ಟಿ ಹೆಣೆಯುತ್ತಿರುವ ಮೇದಾರ ಕುಟುಂಬ
ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಬುಟ್ಟಿ ಹೆಣೆಯುತ್ತಿರುವ ಮೇದಾರ ಕುಟುಂಬ   

ಸೊರಬ: ತಾಲ್ಲೂಕಿನ ಜಡೆ, ಆನವಟ್ಟಿ ಹೋಬಳಿ ವ್ಯಾಪ್ತಿಯ ಸುತ್ತಲಿನ ಗ್ರಾಮಗಳ ಮೇದಾರ ಕುಟುಂಬಗಳು ಬಿದಿರು ಹೆಣೆದು ವಿವಿಧ ಪರಿಕರ ತಯಾರಿಸುವ ಮೂಲಕ ಆಧುನಿಕತೆಯ ಪ್ರಭಾವ ಮೆಟ್ಟಿ ನಿಂತು ಕುಲಕಸುಬು ಮುಂದುವರಿಸಿವೆ. ಆದರೆ, ಸಮರ್ಪಕ ಮಾರುಕಟ್ಟೆ ಕೊರತೆಯಿಂದಾಗಿ ನಲುಗಿವೆ.

12ನೇ ಶತಮಾನದಲ್ಲಿ ಶಿವಶರಣರು ಪ್ರತಿಪಾದಿಸಿದ್ದ ಕಾಯಕ ನಿಷ್ಠೆಯನ್ನು ಪಾಲಿಸುತ್ತಿರುವ ತಾಲ್ಲೂಕಿನ ಜಡೆ ಗ್ರಾಮದ ಶಾಂತಮ್ಮ ಅವರದ್ದೂ ಸೇರಿದಂತೆ ಅನೇಕ ಕುಟುಂಬಗಳು ಕುಲಕಸುಬನ್ನೇ ನಂಬಿಕೊಂಡಿದ್ದು, ಬಿದಿರಿನಲ್ಲಿ ಮೊರ, ಬುಟ್ಟಿ, ಕೂಣಿ, ತೊಟ್ಟಿಲು, ಮಂಕ್ರಿ ಹೆಣೆದು ಜೀವನ ಸಾಗಿಸುತ್ತಿದೆ.

ಫಳಫಳ ಹೊಳೆಯುವ ಸ್ಟೀಲ್, ಮಣ್ಣಲ್ಲೂ ಕರಗದ ಪ್ಲಾಸ್ಟಿಕ್ ವಸ್ತುಗಳಿಗೆ ಮಾರು ಹೋಗಿರುವ ಜನರು ದೇಸಿ ನಿರ್ಮಿತ ಸಾಂಪ್ರದಾಯಕ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಅದರಲ್ಲೇ ಬದುಕು ಕಂಡುಕೊಂಡ ಕುಟುಂಬಗಳಿಗೆ ಮಾತ್ರ ತಮ್ಮ ಉದ್ಯಮದ ಮೇಲೆ ಪ್ರೀತಿ ಜೊತೆಗೆ ಅನಿವಾರ್ಯತೆಯೂ ಇದೆ‌.

ADVERTISEMENT

ಆಧುನಿಕತೆಯ ಸುಳಿಗೆ ಸಿಕ್ಕ ಬೇರೆ ಬೇರೆ ಕುಶಲಕರ್ಮಿಗಳು ಸೂಕ್ತ ಮಾರುಕಟ್ಟೆ ದೊರೆಯದಾದಾಗ ತಮ್ಮ ಮೂಲ ವೃತ್ತಿಯನ್ನು ಬಿಟ್ಟು ಕೂಲಿ, ಗಾರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ತಾಲ್ಲೂಕಿನ ‌ಜಡೆ‌ ಗ್ರಾಮದಲ್ಲಿರುವ ಮೇದಾರ‌ ಕುಟುಂಬಗಳು ಮಾತ್ರ ಕುಲಕಸುಬನ್ನು ಬಿಟ್ಟಿಲ್ಲ.

‘ಲಾಭ, ನಷ್ಟದ ಲೆಕ್ಕ ಹಾಕದೇ ಸ್ವಾವಲಂಬಿ ಬದುಕಿಗಾಗಿ ಸ್ವಯಂ ಉದ್ಯೋಗ ನಂಬಿದ್ದೇವೆ. ಇದರಿಂದ ‌ಆತ್ಮಗೌರವ ಹಾಗೂ ‌ಕುಲಕಸುಬು‌ ಉಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ‌ ಗ್ರಾಮದಲ್ಲಿ ಬುಟ್ಟಿ ಹೆಣೆಯುವ ವೆಂಕಟೇಶ.

ಬಿದಿರಿನಲ್ಲಿ ತೊಟ್ಟಿಲು, ಏಡಿಕೂಣಿ, ಭೂಮಣ್ಣಿ ಬುಟ್ಟಿ, ಚಾಪೆ, ಕಣಜ, ಮೊರ, ಕೆರಸೆ, (ಹೊಲಗದ್ದೆಗಳಿಗೆ ಗೊಬ್ಬರ ಚೆಲ್ಲಲು) ಸೇರಿ ರೈತರಿಗೆ ಬೇಕಾಗುವ ಸಾಮಗ್ರಿಗಳನ್ನು ಹೆಣೆಯಲಾಗುತ್ತದೆ. ಶಾಂತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಪುತ್ರನೊಂದಿಗೆ ಸೇರಿ ₹ 500ರಿಂದ ₹ 1,000 ರೂಪಾಯಿ ಆದಾಯ ಗಳಿಸುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿತ್ತಾರವುಳ್ಳ (ಬಣ್ಣ ಹಚ್ಚಿದ) ಚಾಪೆ, ಬುಟ್ಟಿಗೆ ಉತ್ತಮ ಬೇಡಿಕೆ ಇದೆ. ಮದುವೆಗಳಲ್ಲಿ ವಧು–ವರನನ್ನು ಬಿದಿರಿನಿಂದ ಹೆಣೆದ ಚಿಬಿಲದಲ್ಲಿ (ಕೆರ್ಸಿ) ನಿಲ್ಲಿಸಿ ಮಾಂಗಲ್ಯ ಧಾರಣೆ ಮಾಡಿಸಲಾಗುತ್ತದೆ. ಬೇಸಿಗೆಯಲ್ಲಿ ಮೊರ, ಚಿಬಿಲ, (ಕೆರ್ಸಿ) ಗಳಿಗೆ ಬೇಡಿಕೆ ಜಾಸ್ತಿ. ಮಳೆಗಾಲದಲ್ಲಿ ಏಣಿ ಕೂಣಿ, ಭೂಮಣ್ಣಿ ಬುಟ್ಟಿ, ಚಾಪೆಗಳಿಗೆ ಬೇಡಿಕೆ ಇದೆ. ಬಿದಿರಿನ ವಸ್ತುಗಳು ಅಗತ್ಯವಿರುವುದರಿಂದ ಇಂದಿಗೂ ಮಹತ್ವ ಉಳಿಸಿಕೊಂಡಿದೆ.

ಆರ್ಥಿಕ ಸಂಕಷ್ಟದಲ್ಲಿ ಮೇದಾರ ಕುಟುಂಬ ಬರಗಾಲದಲ್ಲಿ ಹೆಚ್ಚಿದ ಬಿದಿರಿನ ಬೆಲೆ ಸರ್ಕಾರ ನೆರವು ನೀಡಬಹುದೆಂಬ ನಿರೀಕ್ಷೆ
ಸ್ವಂತ ಭೂಮಿ ಇಲ್ಲದೇ ಇದ್ದರೂ ಕುಲಕಸುಬಿನಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಸರ್ಕಾರ ದೇಸಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
ವೆಂಕಟೇಶ ಮೇದಾರ ಕುಟುಂಬದ ಸದಸ್ಯ
ಬಿದಿರು ನಾಶ: ಕುಲಕಸುಬಿಗೆ ಆಪತ್ತು
ಐದಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಅವರಿಸಿರುವುದರಿಂದ ಬಿದಿರು ನಾಶವಾಗಿದೆ. ಕಾಡಿನಲ್ಲಿ ಯಥೇಚ್ಛವಾಗಿ ಲಭ್ಯವಿದ್ದ ಶಾವೆ ಬಿದಿರು ಅರಣ್ಯನಾಶದಿಂದ ಸುಲಭವಾಗಿ ದೊರೆಯುತ್ತಿಲ್ಲ. ಕೆಲವು ರೈತರು ತಾವು ಬೆಳೆದ ಶಾವೆ ಬಿದಿರಿಗೆ ದುಪ್ಪಟ್ಟು ದರ ಹೇಳುತ್ತಾರೆ. ದುಬಾರಿ ಹಣ ನೀಡಿ ಬಿದಿರು ಪಡೆದು ತಯಾರಿಸಿದ ಬುಟ್ಟಿಗೆ ಮಾರುಕಟ್ಟೆಯಲ್ಲಿ ₹ 150ಕ್ಕೆ ಮಾರಾಟವಾಗುವುದು ಕಷ್ಟ. ಕಣಜಕ್ಕೆ ಗರಿಷ್ಠ ಬೆಲೆ ಇದ್ದರೂ ರೈತರು ಇಂದು ಕಣಜದಲ್ಲಿ ಭತ್ತ ಸಂಗ್ರಹಿಸಿಡುತ್ತಿಲ್ಲ. ಎಲ್ಲ ಋತುಗಳಲ್ಲೂ ಎಲ್ಲ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ.‌ ಇದರಿಂದ ಶ್ರಮಕ್ಕೆ ತಕ್ಕಂತೆ ಆದಾಯವನ್ನೂ ನಿರೀಕ್ಷೆ ಮಾಡುವಂತಿಲ್ಲ. ಮಳೆ ಬಿಸಿಲಿನಲ್ಲಿ ಶ್ರೀಮಂತರ ಹೊಲಗದ್ದೆಗಳಲ್ಲಿ ಕೂಲಿ ಮಾಡುವ ಬದಲು ಮನೆಯಲ್ಲಿಯೇ ಕುಳಿತು ಬುಟ್ಟಿ ಹೆಣೆಯಬಹುದು ಎನ್ನುವ ಸಮಾಧಾನ ಹೊರತುಪಡಿಸಿದರೆ ಆರ್ಥಿಕವಾಗಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಸರ್ಕಾರ ಕುಲಕಸುಬು ಉಳಿಸಲು ಕಚ್ಚಾ ವಸ್ತುಗಳ ‌ಖರೀದಿಗೆ ಪ್ರೋತ್ಸಾಹಧನ ಕಲ್ಪಿಸಿದರೆ ಭವಿಷ್ಯದಲ್ಲಿ ಕುಲಕಸಬಿನ‌ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಿದೆ‌ ಎನ್ನುತ್ತದೆ ‌ಮೇದಾರ‌ ಕುಟುಂಬ.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.