ADVERTISEMENT

ಹಬ್ಬದ ವೇಳೆ ಸಮಸ್ಯೆ ಸೃಷ್ಟಿಸಿದರೆ ಸಹಿಸೊಲ್ಲ: ಎಸ್ಪಿ

ಗೌರಿ–ಗಣೇಶ, ಈದ್‌ ಮಿಲಾದ್ ಹಬ್ಬಗಳ ಆಚರಣೆ: ರಾಗಿಗುಡ್ಡದಲ್ಲಿ ಪೊಲೀಸರ ಸಭೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 16:05 IST
Last Updated 29 ಆಗಸ್ಟ್ 2024, 16:05 IST
ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿದರು
ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿದರು   

ಶಿವಮೊಗ್ಗ: ಹಬ್ಬದ ವೇಳೆ ಪೊಲೀಸರ ಸಲಹೆ ಸೂಚನೆಗಳ ಉಲ್ಲಂಘನೆ ಮಾಡಿ ಸಮಸ್ಯೆಗಳ ಸೃಷ್ಟಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಶಿವಮೊಗ್ಗದ ರಾಗಿಗುಡ್ಡದ   ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಣೇಶ ಪ್ರತಿಷ್ಠಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆ ನಡೆಸಿ ಸಲಹೆ ಸೂಚನೆಗಳ ನೀಡಿದರು.

ಯಾವುದೇ ಪ್ರದೇಶದಲ್ಲಿ ಅಹಿತಕರ ಘಟನೆಗಳು ಜರುಗಿದಾಗ, ಹೊರಗಿನವರು ಆ ಪ್ರದೇಶದ ಹೆಸರು ಕೇಳಿದರೆ ತಪ್ಪಾಗಿ ಗ್ರಹಿಸುತ್ತಾರೆ. ಇದರಿಂದ ಆ ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯಾರದ್ದೋ ಮಾತು ಕೇಳಿ, ಸತ್ಯಾಸತ್ಯತೆ  ತಿಳಿಯದೇ ಆ ಕ್ಷಣದಲ್ಲಿ ಅತಿರೇಕದ ವರ್ತನೆ ತೋರುವುದರಿಂದ ಆ ಪ್ರದೇಶದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಕ್ಕೆ ಕಾರಣರಾಗುತ್ತೀರಿ. ಅದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.

ADVERTISEMENT

ಯಾವುದೇ ಸಮಸ್ಯೆ / ಭಿನ್ನಾಭಿಪ್ರಾಯಗಳಿದ್ದಲ್ಲಿ ಹಬ್ಬ ಹಾಗೂ ಮೆರವಣಿಗೆ ಸಂದರ್ಭಗಳಲ್ಲಿ ಅದನ್ನು ವ್ಯಕ್ತಪಡಿಸದೇ,  ಮುಂಚಿತವಾಗಿಯೇ ಗುರು ಹಿರಿಯರು ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಮೂಲದಲ್ಲಿಯೇ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಎರಡೂ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಣೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿ ಎಂದರು.
  
ಈ ಸಂದರ್ಭದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಎಂ. ಸುರೇಶ್,  ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಎಂ. ಸತ್ಯನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.