ADVERTISEMENT

ಶಿವಮೊಗ್ಗ| ಕದಡಿದ್ದ ಮನಸ್ಸುಗಳನ್ನು ತಿಳಿಗೊಳಿಸಿದ ‘ಶಾಂತಿಗಾಗಿ ನಾವು’ ಕಾರ್ಯಕ್ರಮ

ಕೇಸರಿ, ಬಿಳಿ ಹಾಗೂ ಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 4:20 IST
Last Updated 3 ಮಾರ್ಚ್ 2022, 4:20 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ಶಾಂತಿಗಾಗಿ ನಾವು ಕಾರ್ಕ್ರಮದಲ್ಲಿ ಭಾಗವಹಿಸಿದ್ದ ಸರ್ವಧರ್ಮಗಳ ಗುರುಗಳು, ಜಿಲ್ಲಾಡಳಿತದ ಪ್ರತಿನಿಧಿಗಳು ಕೇಸರಿ, ಬಿಳಿ, ಹಸಿರು ಬಟ್ಟೆ ಬೆಸೆಯುವ ಮೂಲಕ ಸೌಹಾರ್ದ ಸಂದೇಶ ಸಾರಿದರು.
ಶಿವಮೊಗ್ಗದಲ್ಲಿ ಬುಧವಾರ ನಡೆದ ಶಾಂತಿಗಾಗಿ ನಾವು ಕಾರ್ಕ್ರಮದಲ್ಲಿ ಭಾಗವಹಿಸಿದ್ದ ಸರ್ವಧರ್ಮಗಳ ಗುರುಗಳು, ಜಿಲ್ಲಾಡಳಿತದ ಪ್ರತಿನಿಧಿಗಳು ಕೇಸರಿ, ಬಿಳಿ, ಹಸಿರು ಬಟ್ಟೆ ಬೆಸೆಯುವ ಮೂಲಕ ಸೌಹಾರ್ದ ಸಂದೇಶ ಸಾರಿದರು.   

ಶಿವಮೊಗ್ಗ: ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಶಾಂತಿಗಾಗಿ ನಾವು’ ಕಾರ್ಯಕ್ರಮ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ, ಹಿಜಾಬ್‌ ವಿವಾದಗಳಿಂದ ಎರಡೂ ಧರ್ಮದ ಮಧ್ಯೆ ಕದಡಿದ್ದ ಮನಸ್ಸುಗಳನ್ನು ತಿಳಿಗೊಳಿಸಲು ನಾಂದಿಹಾಡಿತು.

ವಿವಿಧ ಧರ್ಮಗಳ ಮುಖಂಡರು, ಜಿಲ್ಲಾಡಳಿತ, ಜಿಲ್ಲಾ ಪೊಲಿಸ್‌, ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಶಾಂತಿಯ ಮಂತ್ರ ಜಪಿಸಿದರು. ಶಾಂತಿ, ಸೌಹಾರ್ದದ ದ್ಯೋತಕವಾದ ಕೇಸರಿ, ಬಿಳಿ ಹಾಗೂ ಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಇಂತಹ ಅಹಿತಕರ ಘಟನೆಗಳು ನಡೆದಾಗ ಬಡವರು ಬದುಕು ಕಳೆದುಕೊಳ್ಳುತ್ತಾರೆ. ಧರ್ಮಗುರುಗಳು ಜನರಿಗೆ ಸೌಹಾರ್ದದ ಪಾಠ ಮಾಡಲು ಎಲ್ಲೋ ವಿಫರಾಗಿದ್ದೇವೆ. ಮನುಷ್ಯತ್ವ ಮೀರಿದ ಯಾವುದೇ ಧರ್ಮ ಇಲ್ಲ. ಸೌಹಾರ್ದ ಕಾಪಾಡುವ ಜವಾಬ್ದಾರಿ ಧರ್ಮ ಗುರುಗಳ ಹೆಗಲ ಮೇಲಿದೆ. ನನ್ನ ಧರ್ಮ ನಾನು ಪಾಲನೆ ಮಾಡುವ ಜತೆಗೆ ಇತರ ಧರ್ಮಗಳನ್ನೂ ಸಂತೋಷದಿಂದ ಆಚರಣೆ ಮಾಡಲು ಬಿಡಬೇಕು’ ಎಂದು ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಕಿವಿಮಾತು
ಹೇಳಿದರು.

ADVERTISEMENT

‘ನಾಡಗೀತೆಯಲ್ಲಿ ಪ್ರತಿಪಾದಿಸಿರುವಂತೆ ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ದೇಶ ನಮ್ಮದು. ಹೂದೋಟದಲ್ಲಿ ವಿವಿಧ ಜಾತಿಯ ಹೂಗಳಿವೆ. ಎಲ್ಲವೂ ಸೇರಿ ಸುಂದರ ಹಾರವಾಗುವಂತೆ ಪರಸ್ಪರ ಶಾಂತಿ, ಪ್ರೀತಿಯಿಂದ ಇರಬೇಕು. ಕೊಲೆ ಪಾತಕರಿಗೆ ಧರ್ಮವಿಲ್ಲ. ಕೋಮು ಸಂಘರ್ಷದಿಂದ ನಾಡಿನ ಪ್ರಗತಿಗೆ ಹಿನ್ನಡೆಯಾಗುತ್ತದೆ. ಗಾಳಿ, ನೀರು, ರಕ್ತಕ್ಕೆ ಯಾವುದೇ ಜಾತಿ, ಧರ್ಮವಿಲ್ಲ’ ಎಂದು ಮೌಲ್ವಿಗಳಾದ ಮೌಲಾನ ಶಾಹುಲ್ ಹಮೀದ್ ಮುಸ್ಲಿಯಾರ್ ಅವರು ವಿಶ್ಲೇಷಿಸಿದರು.

‘ಜಗತ್ತಿನಲ್ಲಿ ಶಾಂತಿ ಅಗತ್ಯ. ಅದು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಯಂತ್ರಣ ತಪ್ಪಿದಾಗ ಕೋಪ ಬಂದು ಆಸ್ತಿ, ಪಾಸ್ತಿಯ ಜತೆಗೆ ಮಾನಸಿಕ ಆರೋಗ್ಯ ನಷ್ಟವಾಗುತ್ತದೆ. ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಎಲ್ಲ ಧರ್ಮಗಳಿಗೂ ಮಸಿ ಬಳಿದಂತಾಗಿದೆ’ ಎಂದು ಮಲ್ಲಿಗೇನಹಳ್ಳಿ ಚರ್ಚ್‌ನ ಫಾದರ್ ಕಳವಳ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಆಯೋಜಕ, ವಕೀಲ ಕೆ.ಪಿ. ಶ್ರೀಪಾಲ್, ‘ಘಟನೆಯ ಕುರಿತು ವಿಮರ್ಶೆ ಅಗತ್ಯವಿಲ್ಲ. ಘಟನೆಗೆ ವಿಷಾದವಷ್ಟೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗಬಾರದು. ಬಡವರ ಬದುಕು ಕಷ್ಟವಾಗುತ್ತದೆ. ಜಾತಿ ಧರ್ಮಗಳನ್ನು ಮೀರಿ ನಾವು ನಿಲ್ಲಬೇಕಾಕಿದೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಮಾದರಿಯಾಗಬೇಕು’ ಎಂದರು.

ಎಟಿಎನ್‌ಸಿ ಕಾಲೇಜಿನ ಪ್ರಾಂಶುಪಾಲ ಸುರೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್, ವಿಶ್ವ ಹಿಂದೂ ಪರಿಷತ್‌ ಮುಖಂಡ ರಮೇಶ್‌ ಬಾಬು, ಮೌಲಾನಾ ಈರ್ ಶಾದ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು.

ಕೆ. ಯುವರಾಜ್ ಕುವೆಂಪು ಹಾಗೂ ಜಿ.ಎಸ್‌. ಶಿವರುದ್ರಪ್ಪ ಅವರ ವಿಶ್ವಮಾನವ ಸಂದೇಶದ ದೇಶಭಕ್ತಿಗೀತೆಗಳನ್ನು ಹಾಡಿದರು. ರೈತ ಮುಖಂಡ ಕೆ.ಟಿ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ದಸಂಸ ಮುಖಂಡ ಎಂ. ಗುರುಮೂರ್ತಿ ಸ್ವಾಗತಿಸಿದರು. ವಕೀಲ ಶೆರಾಜ್‌ ಅಹಮದ್‌
ವಂದಿಸಿದರು.

ಯಾವ ಧರ್ಮವೂ ಅಶಾಂತಿ ಬಯಸಲ್ಲ: ಕೂಡಲಿ ಶ್ರೀ

ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿದ ರಾಷ್ಟ್ರ. ವಿಶ್ವದಲ್ಲೇ ಸ್ನೇಹ, ಸಹನೆ, ಶಾಂತಿಗೆ ಹೆಸರಾಗಿದೆ. ಅಶಾಂತಿಯನ್ನು ಯಾವ ಧರ್ಮವೂ, ದೇವರೂ ಬಯಸಿಲ್ಲ. ಬಯಕೆ ಈಡೇರದಿದ್ದಾಗ ದ್ವೇಷದ ಭಾವನೆ ಮೂಡುತ್ತದೆ. ಆಗ ಸಂಘರ್ಷಕ್ಕೆ ದಾರಿಯಾಗುತ್ತದೆ. ಸಮಾಜದಲ್ಲಿ ಎಂದಿಗೂ ಶಾಂತಿ ಪ್ರಧಾನವಾಗಬೇಕು. ಮಾನವ ಸಂಬಂಧಗಳು ಗಟ್ಟಿಯಾಗಬೇಕು ಎಂದು ಕೂಡಲಿ ಶೃಂಗೇರಿ ಸಂಸ್ಥಾನ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪ್ರತಿಪಾದಿಸಿದರು.

ಸಹೋದರತ್ವದ ಭಾವನೆ ಜಾಗೃತವಾಗಲಿ

ಭಾರತ ಸರ್ವ ಜನಾಂಗದ ತೋಟ. ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಜಿಲ್ಲಾಡಳಿತ ಸದಾ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗುವುದು. ಎಲ್ಲರೂ ಸಹೋದರ ಭಾವನೆಯಿಂದ ಇರಬೇಕು. ಆ ದಿಕ್ಕಿನತ್ತ ಸಾಗಬೇಕು. ಶಾಂತಿ ಕಾಪಾಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕೋರಿದರು.

............

ಎಲ್ಲಾ ಧರ್ಮದ ಸಾರಗಳು ಮಾನವೀಯತೆಯೇ ಆಗಿದೆ. ಇಂತಹ ಭಾರತದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ, ಕಾಪಾಡಬೇಕಾದುದು ನಮ್ಮ ಕರ್ತವ್ಯ.

–ಡಾ.ಮಹಾಂತ ಸ್ವಾಮೀಜಿ, ಜಡೆ ಸಂಸ್ಥಾನ ಮಠ

....

ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಿದಾಗ, ಸಮುದಾಯಗಳು ಸ್ಪಂದಿಸಿದಾಗ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ. ಕೆಲವು ದುಷ್ಟ ಶಕ್ತಿಗಳು ಇಂತಹ ಕೆಲಸ ಮಾಡುತ್ತಲೇ ಇರುತ್ತವೆ. ಅಂಥವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ.

–ಲಕ್ಷ್ಮೀ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.