ADVERTISEMENT

ಶಿವಮೊಗ್ಗ: ಜೋಗದ ಅಭಿವೃದ್ಧಿಗೆ 9 ರಂದು ಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 13:25 IST
Last Updated 4 ಸೆಪ್ಟೆಂಬರ್ 2020, 13:25 IST
ಎಚ್. ಹಾಲಪ್ಪ ಹರತಾಳು
ಎಚ್. ಹಾಲಪ್ಪ ಹರತಾಳು   

ಸಾಗರ: ‘ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರ ಜೋಗದ ಸಮಗ್ರ ಅಭಿವೃದ್ಧಿಗೆ ಸೆ.9ರಂದು ಜೋಗದಲ್ಲಿ ಸಭೆ ಕರೆಯಲಾಗಿದ್ದು ಶಿವಮೊಗ್ಗದ ಸಂಸದರು, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಪಿಸಿಯ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜೋಗದ ಅಭಿವೃದ್ಧಿಗೆ ₹ 200 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹ 120 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರ ವಿಶೇಷ ಆಸಕ್ತಿ ಇದೆ. ಈ ಕಾರಣಕ್ಕೆ ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಜೋಗದ ಸುತ್ತಲಿನ ಗ್ರಾಮಗಳ ರಸ್ತೆ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ಜೋಗದ ಕಾರಂಜಿ, ಈಜುಕೊಳ ದುರಸ್ತಿ, ಜಿಪ್ ಲೈನ್, ಕೇಬಲ್ ಕಾರ್, ದೋಣಿ ವಿಹಾರ ಸೇರಿ ವರ್ಷಪೂರ್ತಿ ಜೋಗದಲ್ಲಿ ಪ್ರವಾಸಿಗರು ಇರುವಂತೆ ನೋಡಿಕೊಳ್ಳಲಾಗುವುದು. ಪರಿಸರಕ್ಕೆ ಮಾರಕವಾಗದಂತೆ ಜೋಗವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಪರಿಸರವಾದಿಗಳ ಜೊತೆಗೂ ಸಮಾಲೋಚನೆ ನಡೆಸಿ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.

ADVERTISEMENT

ಶರಾವತಿ ಜಲಾನಯನ ಪ್ರದೇಶದಲ್ಲಿ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ವಿಸ್ತೃತ ಯೋಜನಾ ವರದಿ ಮಾತ್ರ ರೂಪಿಸಲಾಗಿದ್ದು, ಈ ಕಾರಣ ಸಮೀಕ್ಷೆ ನಡೆಯುತ್ತಿದೆ. ನನ್ನ ಕಾಲಮಾನದಲ್ಲಂತೂ ಈ ಯೋಜನೆ ಜಾರಿಗೊಳ್ಳುವುದಿಲ್ಲ. ವಿದ್ಯುತ್ ಉತ್ಪಾದನೆ ಮಟ್ಟ ಏರಿದ್ದು ಬೇಡಿಕೆ ಅಷ್ಟಾಗಿ ಇಲ್ಲದ ಕಾರಣ ಇಂತಹ ಯೋಜನೆಗಳ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

‘ಗಣಪತಿ ಕೆರೆಯ ಪಕ್ಕದಲ್ಲಿ ನಿರ್ಮಿಸಿರುವ ನೂತನ ಧ್ವಜಸ್ತಂಭದಲ್ಲಿ ಆಗಸ್ಟ್ 15ರಂದು ಭಾರಿ ಮಳೆ ಇದ್ದ ಕಾರಣ ಧ್ವಜಾರೋಹಣ ನೆರವೇರಿಸಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಉದ್ದೇಶವಿದೆ. ಅವರು ಇಲ್ಲಿಗೆ ಬಂದರೆ ತಾಲ್ಲೂಕಿಗೆ ಒಂದಿಷ್ಟು ಹೊಸ ಯೋಜನೆಗಳು ದೊರಕುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆಡಳಿತವನ್ನು ಮುಜರಾಯಿಗೆ ವಹಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಷಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ’ ಎಂದರು.

ಬಿಜೆಪಿ ಮುಖಂಡರಾದ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶ್ ಪ್ರಸಾದ್, ಚೇತನ್ ರಾಜ್ ಕಣ್ಣೂರು, ಲೋಕನಾಥ ಬಿಳಿಸಿರಿ, ಗೌತಮ್ ಕೆ.ಎಸ್. ಸಂತೋಷ್ ಶೇಟ್, ಸತೀಶ್ ಮೊಗವೀರ, ಬಿ.ಟಿ.ರವೀಂದ್ರ, ವಿನಾಯಕ ರಾವ್ ಮನೆಘಟ್ಟ, ಸಂತೋಷ್ ಕೆ.ಜಿ ಇದ್ದರು.

‘ಕೊರೊನಾ ಬಾರದಂತೆ ನೋಡಿಕೊಳ್ಳಿ’

‘ಕೊರೊನಾ ಬಂದನಂತರ ನನ್ನ ತೂಕದಲ್ಲಿ 6 ಕೆ.ಜಿ. ಕಡಿಮೆಯಾಗಿದೆ. ಎಂತಹವರ ದೇಹವನ್ನೂ ಈ ಕಾಯಿಲೆ ದಣಿಸುತ್ತದೆ. ಹೀಗಾಗಿ ಕಾಯಿಲೆ ಬಾರದಂತೆ ನೋಡಿಕೊಳ್ಳುವುದೇ ಸೂಕ್ತ. ಒಮ್ಮೆ ಸೋಂಕು ತಗುಲಿ ಗುಣಮುಖರಾದವರಿಗೂ ಮತ್ತೊಮ್ಮೆ ಸೋಂಕು ತಗುಲಿರುವ ಉದಾಹರಣೆ ಇದೆ. ಹೀಗಾಗಿ ಕೊರೊನಾ ಹೋಗಿದೆ ಎಂದು ಜನರು ಉದಾಸೀನ ಮಾಡಬಾರದು’ ಎಂದು ಶಾಸಕ ಹಾಲಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.