ADVERTISEMENT

ವೈವಿದ್ಯ ಮಾವು, ಹಲಸುಗಳ ಪ್ರದರ್ಶನ, ಮಾರಾಟ ಮೇಳ

ಗಾಂಧಿಪಾರ್ಕ್‌ನ ತೋಟಗಾರಿಕಾ ಇಲಾಖೆ ಆವರಣದಲ್ಲಿ ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:05 IST
Last Updated 6 ಜೂನ್ 2019, 13:05 IST
ಶಿವಮೊಗ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸುಗಳ ಮೇಳಕ್ಕೆ ಸಿದ್ಧವಾದ ಮಳಿಗೆಗಳು.
ಶಿವಮೊಗ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸುಗಳ ಮೇಳಕ್ಕೆ ಸಿದ್ಧವಾದ ಮಳಿಗೆಗಳು.   

ಶಿವಮೊಗ್ಗ: ಗಾಂಧಿಪಾರ್ಕ್‌ನ ತೋಟಗಾರಿಕಾ ಇಲಾಖೆ ಆವರಣದಲ್ಲಿ ಜೂನ್‌ 7ರಿಂದ 9ರವರೆಗೆ ಮೂರು ದಿನಗಳು ಮಾವು, ಹಲಸುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಗಳ ಸಹಯೋಗದಲ್ಲಿ ಈ ಮೇಳ ಹಮ್ಮಿಕೊಳ್ಳಲಾಗಿದೆ. ಜತೆಗೆ, ಜೇನು, ಸಾವಯವ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಯೋಗೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಸಾಯನಿಕಯುಕ್ತ ಹಣ್ಣು, ತರಕಾರಿಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಾಗಾಗಿ, ಜನಸಾಮಾನ್ಯರು ಸಾವಯವ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ಮಾವು ಸೇರಿದಂತೆ ಎಲ್ಲ ರೀತಿಯ ಹಣ್ಣುಗಳನ್ನು ಸಾಂಪ್ರದಾಯಿಕವಾಗಿ ಮಾಗಿಸಲು ಆದ್ಯತೆ ನೀಡಲಾಗುತ್ತಿದೆ. ಅಂತಹ ಹಣ್ಣುಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವುದು. ಲಾಭದಾಯಕ ತೋಟಗಾರಿಕೆ ಬೆಳೆಗಳ ಕುರಿತು ರೈತರು ಹಾಗೂ ತಜ್ಞರ ಜತೆ ವಿಚಾರ ವಿನಿಮಯಕ್ಕೆ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯ ರೈತರಿಗೆ ಮಾವು ಬೆಳೆ ಉತ್ತೇಜಿಸಲು ವಿಫುಲ ಅವಕಾಶವಿದೆ. ಜೇನು ಕೃಷಿಯ ಕುರಿತು ಮಾಹಿತಿ ನೀಡಲಾಗುವುದು. ಮೆಲ್ಲಿಫೆರಾ ಎಂಬ ಜೇನು ತಳಿ ನಮ್ಮ ಮಲೆನಾಡಿನ ಭಾಗಕ್ಕೆ ಹೊಂದಿಕೊಳ್ಳುತ್ತದೆ. ಹೆಚ್ಚಿನ ಇಳುವರಿಯನ್ನೂ ಪಡೆಯಬಹುದು. ರೈತರು ತರಬೇತಿ ಪಡೆದು ಜೇನುಕೃಷಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಾವು ಬೆಳೆಗೆ ಪ್ರಸಿದ್ಧಿ ಪಡೆದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 20ಕ್ಕೂ ಹೆಚ್ಚಿನ ಮಾವು ತಳಿಗಳು ಪ್ರದರ್ಶನದಲ್ಲಿ ದೊರೆಯಲಿವೆ. ನೋಂದಾಯಿಸಿದ ರೈತರು ಸಾಂಪ್ರದಾಯಿಕವಾಗಿ ಮಾಗಿಸಿದ ಮಾವುಗಳ ಮಾರಾಟ ಮಾಡಲಿದ್ದಾರೆ. ಅದಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆ ತೆರೆಯಲಾಗಿದೆ. ಜಿಲ್ಲೆಯ ರೈತರಿಗೆ ಮಾವಿನ ಹೊಸ ತಳಿ ಪರಿಚಯಿಸುವ ಜತೆಗೆ, ರಾಜ್ಯ ಹಾಗೂ ದೇಶದ ವಿವಿಧ ತಳಿಗಳು, ಹೈಬ್ರಿಡ್‌ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ಮಲೆನಾಡಿನ ಹಲಸು ತಳಿಗಳು, ಹಲಸಿನ ಉತ್ಪನ್ನಗಳು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬುಗೆರೆ ಹಲಸು, ರೈತ ಸಂಘದವರು ಪ್ರದರ್ಶಿಸುತ್ತಿರುವ ಚಂದ್ರಹಲಸು, ರುದ್ರಾಕ್ಷಿ ಹಲಸು ತಳಿಗಳ ಪ್ರದರ್ಶನ ಮಾರಾಟ ಮಾಡಲಾಗುವುದು. ಅದಕ್ಕಾಗಿ ಪ್ರತ್ಯೇಕ ಮೂರು ಮಳಿಗೆ ಒದಗಿಸಲಾಗಿದೆ ಎಂದು ವಿವರ ನೀಡಿದರು.

ಉಪನ್ಯಾಸ ಮತ್ತು ತರಬೇತಿ:ಜೂನ್ 8ರಂದು ಜಿಲ್ಲಾ ಪಂಚಾಯಿತಿ ಸಹ್ಯಾದ್ರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಸಾವಯವ ಕೃಷಿ ದೃಢೀಕರಣ ಮತ್ತು ಮಾರುಕಟ್ಟೆ ವಿಷಯ ಕುರಿತು ಉಪನ್ಯಾಸ,ಮಧ್ಯಾಹ್ನ 12.45ರಿಂದ ಪ್ರಗತಿಪರ ಸಾವಯವ ಕೃಷಿಕರಿಂದ ಅನುಭವ ಹಂಚಿಕೆ. ಜೂನ್ 9ರಂದು ಬೆಳಿಗ್ಗೆ 10.30ರಿಂದ ಜೇನು ಕೃಷಿ ತರಬೇತಿ. 12.45ರಿಂದ ಹಲಸು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ ವಿಧಾನಗಳ ಕುರಿತು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.