ADVERTISEMENT

ಮೋದಿ ದೇಶ ಕಂಡ ಮಹಾನ್‌ ಸುಳ್ಳುಗಾರ: ಸಚಿವ ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 16:25 IST
Last Updated 29 ಏಪ್ರಿಲ್ 2024, 16:25 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಶಿವಮೊಗ್ಗ: ‘ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ. ಅವರು ಹೇಳುತ್ತಿರುವ ಸುಳ್ಳುಗಳೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣ ಆಗಲಿವೆ’  ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಬೇರೆ ಬೇರೆ ಪಕ್ಷದವರು ಬಹಳಷ್ಟು ಜನರು ಪ್ರಧಾನ ಮಂತ್ರಿಗಳಾಗಿದ್ದಾರೆ. ಆದರೆ, ನರೇಂದ್ರ ಮೋದಿ ಅವರಷ್ಟು ಸುಳ್ಳನ್ನು ಯಾರೂ ಹೇಳಿಲ್ಲ ಎಂದು ಲೇವಡಿ ಮಾಡಿದರು.

‘ನರೇಂದ್ರ ಮೋದಿ ತಮ್ಮ 10 ವರ್ಷಗಳ ಆಡಳಿತದ ಸಾಧನೆಯ ಬಿಟ್ಟು ಬೇರೆ ಬೇರೆ ವಿಷಯಗಳನ್ನು ಜನರ ಮುಂದೆ ಹೇಳುತ್ತಿದ್ದಾರೆ. ಆಯಾ ರಾಜ್ಯಕ್ಕೆ ತಕ್ಕಂತೆ ಪೋಷಾಕು ಧರಿಸಿಕೊಂಡು ವೇಷಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾ ದೇಶದ ಜನರನ್ನೇ ದಿಕ್ಕು ತಪ್ಪಿಸಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

ಅದಾನಿಯಂತಹ ಉದ್ಯಮಿ ₹11 ಲಕ್ಷ ಕೋಟಿ ಆದಾಯ ಗಳಿಸುತ್ತಾರೆ ಎಂದರೆ ದೇಶದ ಸಂಪತ್ತು ಯಾರ ಕೈಯಲ್ಲಿದೆ ಎಂದು ಪ್ರಶ್ನಿಸಿದರು. 

‘ಪಾಕಿಸ್ತಾನ, ತಾಲಿಬಾನ್, ಮುಸಲ್ಮಾನ, ರಾಮಮಂದಿರ ಇವೇ ಮೋದಿ ಅವರ ಚುನಾವಣೆಯ ಸರಕುಗಳು. ಈ ಬಾರಿ ಮಹಿಳೆಯರ ಮಾಂಗಲ್ಯಕ್ಕೂ ಅವರು ಅಪಮಾನ ಮಾಡಿದ್ದಾರೆ. ಇದು ಅವರ ಯೋಗ್ಯತೆ ಬಿಂಬಿಸುತ್ತದೆ. ಮಹಿಳೆಯರು ತಮ್ಮ ತಾಳಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಭಾರತೀಯ ಸಂಸ್ಕೃತಿಯೇ ಅವರಿಗೆ ಹೇಳಿಕೊಟ್ಟಿದೆ’ ಎಂದರು.

‘ಮೋದಿ ಅವರ 10 ವರ್ಷದ ಆಡಳಿತದ ಅವಧಿಯಲ್ಲಿಯೇ ಹಿಂದೂ ಹೆಣ್ಣುಮಕ್ಕಳ ಮೇಲೆ ಹೆಚ್ಚಾಗಿ ಅತ್ಯಾಚಾರ ನಡೆದಿದೆ. ಎನ್‌ಸಿಆರ್‌ಬಿ ವರದಿ ಪ್ರಕಾರ, ಒಂದೇ ವರ್ಷದಲ್ಲಿ 13,000 ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಇದು ಅವರಿಗೆ ಗೊತ್ತಿಲ್ಲವೇ? ಮಣಿಪುರ ಘಟನೆಯ ಬಗ್ಗೆ ಮೋದಿ ಏಕೆ ತುಟಿ ಬಿಚ್ಚುತ್ತಿಲ್ಲ?’ ಎಂದು ಪ್ರಶ್ನಿಸಿದರು.

‘ಗೋಮಾಂಸ ರಫ್ತಿಯಲ್ಲಿ ಭಾರತವನ್ನು ವಿಶ್ವದಲ್ಲಿಯೇ ಎರಡನೇ ಸ್ಥಾನಕ್ಕೆ ತಂದಿರುವುದು ಹಾಗೂ ನೋಟು ರದ್ದತಿ ಮೂಲಕ ಹಗರಣ ನಡೆಸಿದ್ದೇ ಮೋದಿ ಅವರ ಸಾಧನೆ. ತಮಿಳುನಾಡಿನಲ್ಲಿ ಬಿಜೆಪಿ ಇಲ್ಲ ಎಂಬ ಕಾರಣಕ್ಕೆ ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಸಲಾಯಿತು. ಆದರೆ, ಕರ್ನಾಟಕದಲ್ಲಿ ಬಿಜೆಪಿ ಪರ ಮಾತನಾಡಲು ನಾಯಕರು ಬೇಕಲ್ಲವೇ. ಅದಕ್ಕಾಗಿ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ’ ಎಂದರು.

ಗೀತಾ ಶಿವರಾಜಕುಮಾರ್ ಅವರ ಪರ ಮತದಾರರ ಒಲವು ಹೆಚ್ಚಾಗುತ್ತಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ಈ ಬಾರಿ ಬಿಜೆಪಿ 200 ಸ್ಥಾನಗಳನ್ನೂ ದಾಟುವುದಿಲ್ಲ ಎಂದರು.

ಅನಿಲ್ ಕುಮಾರ್ ತಡಕಲ್, ಚಂದ್ರಭೂಪಾಲ್, ರವಿಕುಮಾರ್, ಎಸ್.ಕೆ. ಮರಿಯಪ್ಪ, ಜಿ.ಡಿ. ಮಂಜುನಾಥ್, ಎನ್.ಕೆ. ಶ್ಯಾಮಸುಂದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.