ADVERTISEMENT

ಶಿವಮೊಗ್ಗ: ತುಂಗಾ ಸೇತುವೆ ಪುನರ್ನಿರ್ಮಾಣಕ್ಕೆ ಸಚಿವ ಜಾರಕಿಹೊಳಿ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:05 IST
Last Updated 6 ಜನವರಿ 2026, 3:05 IST
ಶಿವಮೊಗ್ಗದಲ್ಲಿ ಭಾನುವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತುಂಗಾ ನದಿ ಹಳೆಯ ಸೇತುವೆಯನ್ನು ಪರಿಶೀಲಿಸಿ ಮುಖಂಡರೊಂದಿಗೆ ಚರ್ಚಿಸಿದರು
ಶಿವಮೊಗ್ಗದಲ್ಲಿ ಭಾನುವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತುಂಗಾ ನದಿ ಹಳೆಯ ಸೇತುವೆಯನ್ನು ಪರಿಶೀಲಿಸಿ ಮುಖಂಡರೊಂದಿಗೆ ಚರ್ಚಿಸಿದರು   

ಶಿವಮೊಗ್ಗ: ಇಲ್ಲಿನ ಹಳೆಯ ತುಂಗಾ ಸೇತುವೆ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕೋರಿಕೆ ಹಿನ್ನೆಲೆಯಲ್ಲಿ ಭಾನುವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಥಳ ಪರಿಶೀಲನೆ ನಡೆಸಿದರು.

ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಾರಿಗೆ ವ್ಯವಸ್ಥೆಯ ಹಿತದೃಷ್ಟಿಯಿಂದ, ಹಳೆಯ ತುಂಗಾ ಸೇತುವೆಯ ಜಾಗದಲ್ಲಿ ಹೊಸ ಸೇತುವೆಯನ್ನು ನಿರ್ಮಿಸುವುದು ಅತ್ಯಂತ ತುರ್ತು ಅಗತ್ಯ ಎಂದು ಪರಿಶೀಲನೆ ಸಂದರ್ಭದಲ್ಲಿ ಸಚಿವರಿಗೆ ಹೇಳಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಅದಕ್ಕೆ ₹40 ಕೋಟಿ ಬಿಡುಗಡೆ ಮಾಡುವಂತೆ ಕೋರಿದರು.

ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿರುವುದರಿಮದ ಅದನ್ನು ಗಂಭೀರವಾಗಿ ಪರಿಗಣಿಸಿ, ಕಳೆದ ಜೂನ್ ತಿಂಗಳಿನಲ್ಲಿಯೇ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಪ್ರಾಥಮಿಕ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವರು, ಶಿವಮೊಗ್ಗಕ್ಕೆ ವಾಲ್ಮೀಕಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಬಂದಿದ್ದ ವೇಳೆ ಖುದ್ದಾಗಿ ಸೇತುವೆಯ ಸ್ಥಿತಿಗತಿ ವೀಕ್ಷಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿರುವ ವರದಿಯಂತೆ, ಈ ನೂತನ ಸೇತುವೆ ನಿರ್ಮಾಣಕ್ಕೆ ಅಂದಾಜು ₹40 ಕೋಟಿ ವೆಚ್ಚ ತಗುಲಲಿದ್ದು, ಸಂಪೂರ್ಣ ಪ್ಲಾನ್ ಮತ್ತು ಅಂದಾಜು ಪಟ್ಟಿಯನ್ನು ಸಚಿವರಿಗೆ ಹಸ್ತಾಂತರಿಸಲಾಯಿತು. ಸೇತುವೆಯು ನಗರದ ಆಯಕಟ್ಟಿನ ಭಾಗಗಳನ್ನು ಸಂಪರ್ಕಿಸುವುದರಿಂದ, ಯಾವುದೇ ವಿಳಂಬವಿಲ್ಲದೆ ತಾಂತ್ರಿಕ ಅನುಮೋದನೆ ಮತ್ತು ಆರ್ಥಿಕ ನೆರವು ನೀಡುವಂತೆ ಮತ್ತೊಮ್ಮೆ ಒತ್ತಾಯಿಸಲಾಯಿತು ಎಂದು ನಂತರ ಚನ್ನಬಸಪ್ಪ ಮಾಧ್ಯಮದವರಿಗೆ ತಿಳಿಸಿದರು.

ಸೇತುವೆ ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ಎಚ್.ಸಿ.ಯೋಗೀಶ್, ಎನ್.ರವಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.