ADVERTISEMENT

ರಿಪ್ಪನ್‌ಪೇಟೆ | ಮಿಶ್ರಬೆಳೆ ಪದ್ಧತಿ ರೈತರಿಗೆ ವರದಾನ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:04 IST
Last Updated 26 ಅಕ್ಟೋಬರ್ 2025, 6:04 IST
ರಿಪ್ಪನ್‌ಪೇಟೆ ಸಮೀಪದ ಕೆದಲಗುಡ್ಡೆ ಗ್ರಾಮದಲ್ಲಿ ಮಿಶ್ರಬೆಳೆ ಪದ್ಧತಿ ವೀಕ್ಷಿಸುತ್ತಿರುವ ಶಾಸಕ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ ಸಮೀಪದ ಕೆದಲಗುಡ್ಡೆ ಗ್ರಾಮದಲ್ಲಿ ಮಿಶ್ರಬೆಳೆ ಪದ್ಧತಿ ವೀಕ್ಷಿಸುತ್ತಿರುವ ಶಾಸಕ ಆರಗ ಜ್ಞಾನೇಂದ್ರ   

ರಿಪ್ಪನ್‌ಪೇಟೆ: ಹವಾಮಾನ ವೈಪರೀತ್ಯದಿಂದ ತೋಟಗಾರಿಕಾ ಬೆಳೆಗಳ ಇಳುವರಿ ಕುಂಠಿತವಾಗಿದೆ. ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಶುಂಠಿಗೆ ಕೊಳೆರೋಗ ಸೇರಿದಂತೆ ವಾಣಿಜ್ಯ ಬೆಳೆಗಳು ನೆಲಕಚ್ಚುತ್ತಿದ್ದು, ರೈತರು ಸವಾಲು ಎದುರಿಸುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾಹಿತಿ ಸಲಹೆ ನೀಡಿದರು. 

ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಲಗುಡ್ಡೆ ನಿವಾಸಿ ಸೆಲಿ ಜೋಸೆಫ್ ಅವರ ಅಡಿಕೆ ಸಿಲ್ವರ್–ಕಾಳುಮೆಣಸು ಹಾಗೂ ಕಾಫಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ ನಂತರ ಮಾತನಾಡಿದರು.

ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರದೊಂದಿಗೆ ಹಲವಾರು ಬಾರಿ ಚರ್ಚಿಸಲಾಗಿದೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಅಡಿಕೆಯಿಂದ ತಯಾರಾಗುವ ಗುಟ್ಕಾ ನಿಷೇಧಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಇದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿರುವುದು ಒಂದೆಡೆಯಾದರೆ, ಮಲೆನಾಡಿನ ವ್ಯಾಪ್ತಿಯ ಹೊಸನಗರ, ಸಾಗರ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಸೇರಿ ಹಲವು ಕಡೆಯಲ್ಲಿ ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗವು ಅವರನ್ನು ಜರ್ಜರಿತರನ್ನಾಗಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೆಲಿ ಜೋಸೆಫ್ ಅವರ ಲಾಭದಾಯಕ ಮಾದರಿ ಕೃಷಿ ಪದ್ಧತಿ ರೈತರ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಗುಡ್ಡಗಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಸೀಮಿತವಾಗಿದ್ದ ಸಿಲ್ವರ್, ಕಾಳುಮೆಣಸು ಹಾಗೂ ಕಾಫಿ ಬೆಳೆಗಳು  ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆಲೆ ಕಂಡುಕೊಂಡಿವೆ. ಅಡಿಕೆ ಗಿಡಗಳ ಮಧ್ಯದಲ್ಲಿ ಮಿಶ್ರಬೆಳೆಯಾದ ಸಿಲ್ವರ್, ಕಾಫಿ ಮತ್ತು ಕಾಳುಮೆಣಸು ಬೆಳೆಸಿ ಹೆಚ್ಚು ಲಾಭ ಗಳಿಸಬಹುದು. ಒಂದು ವೇಳೆ ಅಡಿಕೆಯಲ್ಲಿ ರೋಗ ಉಲ್ಬಣಗೊಂಡು ಅದು ಸಂಪೂರ್ಣ ನಾಶವಾದರೂ, ಮಿತ್ರ ಬೆಳೆಗಳು ರೈತರ ಬದುಕಿಗೆ ಆಸರೆಯಾಗಲಿವೆ ಎಂದು ಅವರು ವಿವರಿಸಿದರು.

ತೀರ್ಥಹಳ್ಳಿಯ 50 ಪ್ರಗತಿಪರ ರೈತರ ತಂಡಕ್ಕೆ ಪ್ರಾತ್ಯಕ್ಷಿಕೆ ನೀಡಲಾಯಿತು. ಪಿ.ಜೆ.ಸೆಲಿ ಜೋಸೆಫ್, ಪಿ.ಜೆ. ವರ್ಗೀಸ್, ಅಭಿನಂದನ್, ಜ್ಞಾನೇಂದ್ರ, ಮಹೇಶ ಹೆದ್ದೂರು, ಸಚಿನ್‌ ಕೆಂಚನಾಲ ಮತ್ತು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.