ADVERTISEMENT

ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಶಾಸಕರು: ಮಾಜಿ ಸಚಿವ ಕಿಮ್ಮನೆ ರತ್ನಾಕರ

ಆರಗ ಜ್ಞಾನೇಂದ್ರರಿಗೆ ಶಾಸಕರ ಸ್ಥಾನಮಾನದ ಗೌರವ ಗೊತ್ತಿಲ್ಲ: ಕಿಮ್ಮನೆ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:59 IST
Last Updated 8 ಜನವರಿ 2026, 2:59 IST
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು   

ತೀರ್ಥಹಳ್ಳಿ: ‘ಐದು ಬಾರಿ ಗೆದ್ದರೂ ಆರಗ ಜ್ಞಾನೇಂದ್ರ ಅವರಿಗೆ ಶಾಸಕ ಸ್ಥಾನಮಾನದ ಗೌರವ ಗೊತ್ತಿಲ್ಲ. ಪ್ರತಿಭಟನೆ ಹೆಸರಲ್ಲಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ದೂರಿದರು.  

‘ತಹಶೀಲ್ದಾರ್‌ ಕೊಠಡಿ ಮುಂಭಾಗ ಪ್ರತಿಭಟನೆ ನಡೆಸುವುದು ಕಾನೂನಿನ ಪ್ರಕಾರ ಅಪರಾಧ ಎಂಬುದು ಶಾಸಕರಿಗೆ ಗೊತ್ತಿಲ್ಲವೇ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. 

‘ಜ್ಞಾನೇಂದ್ರರ ಮೂರ್ಖತನಕ್ಕೆ ಕೊನೆ ಇಲ್ಲ. ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿಗೆ ಅಡ್ಡಿಪಡಿಸಿದ ಕಾರಣಕ್ಕೆ ಅವರ ವಿರುದ್ಧ ದೂರು ನೀಡುವಂತೆ ಯುವ ಕಾಂಗ್ರೆಸ್‌ಗೆ ಸೂಚನೆ ನೀಡಿದ್ದೇನೆ’ ಎಂದರು. 

ADVERTISEMENT

‘1986ರಿಂದ ಬಿಜೆಪಿ ಕಾರ್ಯಕರ್ತನಾಗಿ ಮೇಳಿಗೆ ಗ್ರಾಮದ ಚಿನ್ನಪ್ಪಗೌಡ ಕೆಲಸ ಮಾಡಿದ್ದಾರೆ.‌ ಅವರು ಬಿಜೆಪಿ ತ್ಯಜಿಸುತ್ತಿದ್ದಂತೆ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಜೊತೆ ಪಕ್ಷ ಸಂಘಟಿಸಿದ ಚಿನ್ನಪ್ಪಗೌಡರನ್ನು ಶಾಸಕರು ಮರೆತಿದ್ದಾರೆ. ವಿವಾದಿತ ಜಮೀನು ಸ್ಥಳಕ್ಕೆ ಭೇಟಿ ನೀಡಿ ನಾನು ಎಲ್ಲ ಮಾಹಿತಿ ಪಡೆದಿದ್ದೇನೆ’ ಎಂದರು. 

‘ಮೇಳಿಗೆ ಗ್ರಾಮದ ಹೂವಪ್ಪ, ಚಿನ್ನಪ್ಪ ಇಬ್ಬರೂ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಶಾಸಕರಿಗೆ ಇಬ್ಬರ ನಡುವೆ ರಾಜೀ ಮಾಡಿಸಲು ಸಾಧ್ಯವಿರಲಿಲ್ಲವೇ? ಕೇವಲ ರಾಜಕೀಯ ಕಾರಣಕ್ಕೆ ಅಧಿಕಾರಿಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ’ ಎಂದು ಆರೋಪಿಸಿದರು. 

‘ರಾಮೇಶ್ವರ ದೇವರ ರಥದ ಚಕ್ರ ದುರಸ್ತಿ ಆಗಿದ್ದು, ಹೊಸ ಚಕ್ರಕ್ಕೆ ಹಣದ ಕೊರತೆ ಆಗಿತ್ತು. ನಿಜವಾದ ಜವಾಬ್ದಾರಿ ಇದ್ದಿದ್ದರೆ ಸಾರ್ವಜನಿಕರ ದೇಣಿಗೆ ಸಂಗ್ರಹಿಸಿ ಚಕ್ರ ನಿರ್ಮಾಣ ಮಾಡಬಹುದಿತ್ತು. ಎಳ್ಳಮಾವಾಸ್ಯೆ ಜಾತ್ರೆಗೆ 1 ತಿಂಗಳು ಇರುವಾಗ ಚಕ್ರದ ವಿವಾದ ಉದ್ಭವಿಸಿತು. ನಾನು ಎರಡೂವರೆ ಲಕ್ಷ ರೂಪಾಯಿ ಸ್ವಂತ ಹಣ ನೀಡಿ ಹೊಸ ಚಕ್ರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟೆ. ಆರೋಪಕ್ಕೆ ಮಾತ್ರ ಶಾಸಕರು ಸೀಮಿತರಾದರು. ಜವಾಬ್ದಾರಿಯಿಂದ ನುಣುಚಿಕೊಂಡರು’ ಎಂದು ದೂರಿದರು. 

ಶಾಸಕ ಆರಗ ಜ್ಞಾನೇಂದ್ರ ಅವರ ತವರೂರು ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಗಸಾಡಿ ಶಾಮಣ್ಣ, ಸದಸ್ಯರಾದ ರಾಜೇಶ್ ಮಳಲಿ, ಲೋಕೇಶ್ ಅಗಸಾಡಿ, ಶಂಕರಪ್ಪ ಕುಟ್ರ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು. 

ಎಂಎಡಿಬಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಯುವ ಕಾಂಗ್ರೆಸ್‌ ಅಧ್ಯಕ್ಷ ಹೊಸ್ಕೇರಿ ರವಿಕುಮಾರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ಗುಡ್ಡೇಕೊಪ್ಪ ಪಂಚಾಯಿತಿ ಸದಸ್ಯರಾದ ನಾಗರತ್ನಾ ಯಲ್ಲಪ್ಪ, ಜಯಂತಿ ರಮೇಶ್, ಸಂದೇಶ್ ಶೆಟ್ಟಿ ಜಯಪುರ, ಹೇಮಂತ್ ಹೆಗ್ಡೆ, ನಾಗೇಶ್ ಗವಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.