ಶಿವಮೊಗ್ಗ: ಬಡವರ ಹಾಗೂ ಜನಪರವಾದ ಆಡಳಿತ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಇಲ್ಲಿನ ಈಡಿಗರ ಭವನದಲ್ಲಿ ನಡೆದ ಎಸ್.ಬಂಗಾರಪ್ಪ ಅವರ 92ನೇ ಜನ್ಮದದಿನ ಕಾರ್ಯಕ್ರಮದಲ್ಲಿ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ಬಡವರ ಬಂಧು ಎಂಬ ಬಿರುದನ್ನು ಜನಸಾಮಾನ್ಯರು ಬಂಗಾರಪ್ಪ ಅವರಿಗೆ ನೀಡಿದ್ದಾರೆ. ನಾಡಿನ ಯಾವ ರಾಜಕಾರಣಿಗೂ ಇಂತಹ ಅವಕಾಶ ಸಿಕ್ಕಿಲ್ಲ. ನಾನು ಸೇರಿದಂತೆ ಜನಸಾಮಾನ್ಯರನ್ನು ಜನಪ್ರತಿನಿಧಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಾಸಕರನ್ನು ಮಾಡುವ ಶಕ್ತಿ ಬಂಗಾರಪ್ಪ ಅವರಲ್ಲಿತ್ತು’ ಎಂದು ಬಣ್ಣಿಸಿದರು.
‘ಬಂಗಾರಪ್ಪ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಅಗತ್ಯವಿದೆ. ಬಡವರಿಗಾಗಿ ಅವರು ಜಾರಿಗೊಳಿಸಿದ ಯೋಜನೆಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ನಾಡು ಕಂಡಿರುವ ಅಪರೂಪದ ರಾಜಕಾರಣಿ ಬಂಗಾರಪ್ಪ’ ಎಂದು ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದರು.
ಜಿ.ಡಿ. ಮಂಜುನಾಥ್, ಎಸ್.ಸಿ. ರಾಮಚಂದ್ರಪ್ಪ, ಎನ್. ಹೊನ್ನಪ್ಪ, ಕೆ.ವೈ. ರಾಮಚಂದ್ರ, ಕೆ.ಎಲ್. ಉಮೇಶ್, ಪರಶುರಾಮಪ್ಪ, ಕಾಗೋಡು ರಾಮಪ್ಪ, ಉದಯಕುಮಾರ್, ಮಹೇಶ್, ರಮೇಶ್, ರಾಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.