ADVERTISEMENT

ಚುನಾವಣೆಗೆ ಸ್ವರ್ಧಿಸುವ ಇಚ್ಛೆ: ಆಯನೂರು

ನೈರುತ್ಯ ಪದವೀಧರರ ಕ್ಷೇತ್ರ; ಚುನಾವಣಾ ಕಾರ್ಯಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 14:29 IST
Last Updated 24 ಸೆಪ್ಟೆಂಬರ್ 2023, 14:29 IST
ಶಿವಮೊಗ್ಗ ಮಿಷನ್ ಕಾಂಪೌಂಡ್‌ನಲ್ಲಿ ಭಾನುವಾರ ನೈರುತ್ಯ ಪದವೀಧರ ಕ್ಷೇತ್ರ ಮತದಾರರ ನೋಂದಣಿ ಚುನಾವಣಾ ಕಾರ್ಯಾಲಯವನ್ನು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಉದ್ಘಾಟಿಸಿದರು
ಶಿವಮೊಗ್ಗ ಮಿಷನ್ ಕಾಂಪೌಂಡ್‌ನಲ್ಲಿ ಭಾನುವಾರ ನೈರುತ್ಯ ಪದವೀಧರ ಕ್ಷೇತ್ರ ಮತದಾರರ ನೋಂದಣಿ ಚುನಾವಣಾ ಕಾರ್ಯಾಲಯವನ್ನು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಉದ್ಘಾಟಿಸಿದರು   

ಶಿವಮೊಗ್ಗ: ‘ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸ್ವರ್ಧಿಸುವ ಇಚ್ಛೆ ಇದ್ದು, ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದರು.

ಇಲ್ಲಿನ ಮಿಷನ್ ಕಾಂಪೌಂಡ್‌ನಲ್ಲಿ ಭಾನುವಾರ ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಸ್ಪರ್ಧಿಸಲು ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಪಕ್ಷ ಯಾರಿಗೆ ಮಣೆ ಹಾಕಲಿದೆ ಕಾದು ನೋಡಬೇಕು. ನನಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸ ಇದೆ’ ಎಂದರು.

ADVERTISEMENT

‘ನೈರುತ್ಯ ಪದವೀಧರರ ಕ್ಷೇತ್ರ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಕೊಡುಗು, ದಾವಣಗೆರೆ ಸೇರಿದಂತೆ ಹೊನ್ನಾಳ್ಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕು ಒಳಗೊಂಡಿದೆ. ಸೆ.30ರಿಂದ ಚುನಾವಣಾ ನೋಂದಣಿ ಕಾರ್ಯ ನಡೆಯಲಿದೆ. ರಾಜ್ಯದ ಎಲ್ಲಾ ನೌಕರರು, ಶಿಕ್ಷಕರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಪರ ಹೋರಾಟ ಮಾಡಲು ವಿಧಾನಪರಿಷತ್ ಚುನಾವಣೆ ನೆರವಾಗಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾದರೆ ನೌಕರರ ಹಲವು ಸಮಸ್ಯೆಗಳಿಗೆ ಈ ಚುನಾವಣೆ ಮೂಲಕ ನ್ಯಾಯ ಒದಗಿಸಲು ಶ್ರಮಿಸಲಿದ್ದೇನೆ’ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಬರಗಾಲದ ಸಮಯದಲ್ಲಿ ಈ ಸಮಸ್ಯೆ ಸಾಮಾನ್ಯ. ರೈತರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ನಮಗೆ ಅನುಕೂಲಕರವಾಗಿ ಬಂದಿಲ್ಲ. ವೀರಾವೇಷದ ಹೇಳಿಕೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಿರೋಧ ಪಕ್ಷಗಳ ಸಹಕಾರ ಅಗತ್ಯ’ ಎಂದರು.

ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಕ್ತಿ ಕುಂದಿದೆ. ಎರಡೂ ಪಕ್ಷಗಳಿಗೆ ಮೈತ್ರಿಯ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಮುಂದಿನ ದಿನದಲ್ಲಿ ಕುರುಡನ ಹೆಗಲ ಮೇಲೆ ಕುಂಟನ ಸವಾರಿ ನಡೆಯಲಿದ್ದು, ಆ ಸವಾರಿಗೆ ಆಯಸ್ಸು ಕಡಿಮೆ ಎಂದು ಟೀಕಿಸಿದರು.

ಪ್ರಮುಖರಾದ ವೈ.ಎಚ್. ನಾಗರಾಜ್, ಧೀರಾಜ್ ಹೊನ್ನವಿಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.