ADVERTISEMENT

ಮಂಗನ ಕಾಟ: ಕಂಗಾಲಾದ ವಾಹನ ಸವಾರರು

ಶಿರಿಹಳ್ಳಿ ತಾಂಡಾದ ರಸ್ತೆಯಲ್ಲಿ ಹೋಗಲು ಹಿಂದೇಟು ಹಾಕುವ ಜನ

ಎಂ.ನವೀನ್ ಕುಮಾರ್
Published 26 ನವೆಂಬರ್ 2020, 4:48 IST
Last Updated 26 ನವೆಂಬರ್ 2020, 4:48 IST
ಶಿರಾಳಕೊಪ್ಪ ಸಮೀಪದ ಶಿರಿಹಳ್ಳಿ ತಾಂಡಾದಲ್ಲಿ ಮಂಗನ ದಾಳಿಗೆ ಒಳಗಾದ ‌ಸತೀಶ್ ಕುಮಾರ್
ಶಿರಾಳಕೊಪ್ಪ ಸಮೀಪದ ಶಿರಿಹಳ್ಳಿ ತಾಂಡಾದಲ್ಲಿ ಮಂಗನ ದಾಳಿಗೆ ಒಳಗಾದ ‌ಸತೀಶ್ ಕುಮಾರ್   

ಶಿರಾಳಕೊಪ್ಪ: ಸಮೀಪದಶಿರಿಹಳ್ಳಿ ತಾಂಡಾದಲ್ಲಿ ರಸ್ತೆಯಲ್ಲಿ ಸಾಗುವ ವಾಹನ ಸವಾರರ ಮೇಲೆ ಮಂಗಗಳು ಮುಗಿಬಿದ್ದು ಘಾಸಿಗೊಳಿಸುತ್ತಿವೆ. ಮಂಗಗಳ ವರ್ತನೆಯಿಂದ ಜನರು ಭೀತಿಯಲ್ಲಿದ್ದಾರೆ.

ಮೂರು ಮಂಗಗಳು ಇದ್ದು, ಒಂದು ಮಂಗ ಕಾಟ ಕೊಡುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ವಾಹನ ಸವಾರರ ಮಾತ್ರ ದಾಳಿ ಮಾಡುವ ಮಂಗ ಪಾದಚಾರಿಗಳಿಗೆ ಇದುವರೆಗೂ ಯಾವುದೇ ತೊಂದರೆ ನೀಡಿಲ್ಲ. ಬೈಕ್ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಾಲಕರು ಒಬ್ಬರೆ ಸವಾರಿ ಮಾಡುತ್ತಿರುವ ಕಂಡರೆ ಮಂಗಗಳು ತಕ್ಷಣ ಹಾರಿ ಬಂದು ಕಚ್ಚುತ್ತಿವೆ. ಇದರಿಂದ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್ ಒಯ್ಯಲು ಒಬ್ಬೊಬ್ಬರು ಹೋಗಲು ಭಯಪಡುವಂತಾಗಿದೆ.

ADVERTISEMENT

ಇದಕ್ಕೆ ನಾಗರಿಕರು ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳಿನಿಂದ 15ಕ್ಕೂ ಹೆಚ್ಚು ಬೈಕ್ ಸವಾರರ ಮೇಲೆ ಮಂಗ ದಾಳಿ ಮಾಡಿದ್ದು, 8ಕ್ಕೂ ಹೆಚ್ಚು ಸವಾರರು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ.

ಮಂಗಳವಾರ ಗ್ರಾಮದ ಸತೀಶ್ ಕುಮಾರ್ ಅವರ ಬೆನ್ನಿನ ಮೇಲೆ ಪರಚಿ ಗಾಯಮಾಡಿದೆ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮಂಗಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ವಿಷಯ ತಿಳಿಸುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಮಂಗಗಳನ್ನು ಬಲೆ ಹಾಕಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಮಂಗಗಳನ್ನು ಹಿಡಿಯುವ ತಜ್ಞರನ್ನು ಸಂಪರ್ಕಿಸಿದ್ದಾರೆ. ಈಗಾಗಲೇ ನಗರದಿಂದ 2 ಬೋನ್‌ಗಳನ್ನು ತರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 3 ಮಂಗಗಳು ಇದ್ದು, ಅದರಲ್ಲಿ ಒಂದು ಮಂಗ ಮಾತ್ರ ಕಾಟ ನೀಡುತ್ತಿದೆ. ಹಾಗಾಗಿ ಯಾವ ಮಂಗ ಬೋನಿಗೆ ಬೀಳುತ್ತದೆ ಎನ್ನುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

‘ಮಂಗಗಳ ಉಪಟಳಕ್ಕೆ ಟ್ರ್ಯಾಕ್ಟರ್‌ಗಳನ್ನು ಮನೆಯಿಂದ ಹೊರಗೆ ತೆಗೆದಿಲ್ಲ. ಗದ್ದೆಯಲ್ಲಿ ಮುರಿದು ಬಿದ್ದಿರುವ ಜೋಳವನ್ನು ಮನೆಗೆ ತರಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮಂಗಗಳ ಸೆರೆ ಕಾರ್ಯಾಚರಣೆ ನಡೆಸಬೇಕು’ ಎಂದು ಗ್ರಾಮದ ರವಿ ಒತ್ತಾಯಿಸಿದರು.

‘ಮಂಗ ಏಕೆ ಹೀಗೆ ಮಾಡುತ್ತಿದೆ ಎಂಬುದು ತಿಳಿದಿಲ್ಲ. ಇದನ್ನು ಸೆರೆಹಿಡಿದು ಪರೀಕ್ಷಿಸಿದ ಮೇಲೆ ನಿಖರವಾಗಿ ಕಾರಣ ತಿಳಿಸಲು ಸಾಧ್ಯ. ದಾಳಿಗೆ ತುತ್ತಾಗಿರುವ ಗ್ರಾಮಸ್ಥರು ವೈದ್ಯರನ್ನು ಭೇಟಿ ಮಾಡಿ ರೇಬಿಸ್ ಚುಚ್ಚುಮದ್ದು ಪಡೆಯಬೇಕು’ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.