ಶಿವಮೊಗ್ಗ: ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಎಂಆರ್‌ಐ ಸ್ಜ್ಯಾನಿಂಗ್ ವ್ಯವಸ್ಥೆಗೆ ಅವಕಾಶ ಮಾಡಿಕೊಡುವಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ನಿರ್ದೇಶಕ ಡಾ.ವಿರೂಪಾಕ್ಷಪ್ಪ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಸೂಚನೆ ನೀಡಿದರು.
ಸಿಮ್ಸ್‌ನ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲು ಎರಡು ತಿಂಗಳ ಪಾಳಿ ಇರುತ್ತದೆ ಎಂಬ ವಿಷಯ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. ಇನ್ನೊಂದು ಸ್ಕ್ಯಾನಿಂಗ್ ಯಂತ್ರ ಅಳವಡಿಕೆಗೆ ಪ್ರಸ್ತಾವ ಕಳುಹಿಸುವಂತೆ ಸಿಮ್ಸ್ ಆಡಳಿತಕ್ಕೆ ಹೇಳಿದರು.
ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 25ರಿಂದ 30 ಎಂಆರ್‌ಐ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಅದನ್ನು ದಿನದ 24 ಗಂಟೆಗೆ ವಿಸ್ತರಿಸಿ, ಮೂರು ಪಾಳಿಗಳಲ್ಲಿ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಿಕೊಳ್ಳಿ. ಅದಕ್ಕೆ ಮಂಜೂರಾತಿ ನೀಡುವೆ ಎಂದು ಹೇಳಿದರು.
ಸಿಮ್ಸ್‌ನಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗಳಿಗೆ ಹಾಲಿ ಇರುವ 100 ಸೀಟುಗಳ ಬದಲಿಗೆ 250 ಸೀಟುಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಎಂಬಿಬಿಎಸ್ ಸೀಟು ಕೂಡ ಹೆಚ್ಚಳಕ್ಕೆ ಪ್ರಸ್ತಾವವಿದೆ. ಅದಕ್ಕೆ ಅಗತ್ಯವಿರುವ ಕಟ್ಟಡ, ಮೂಲ ಸೌಕರ್ಯ ಹಾಗೂ ಹಾಸ್ಟೆಲ್‌ಗಳಿಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಸರ್ಕಾರಿ ಸಂಸ್ಥೆಗಳಲ್ಲಿ ವೈದ್ಯಕೀಯ ಉನ್ನತ ಶಿಕ್ಷಣ ಹಾಗೂ ಅರೆ ವೈದ್ಯಕೀಯ (ನರ್ಸಿಂಗ್) ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ವತಿಯಿಂದ ಪ್ರತೀ ವರ್ಷ ₹ 30 ಸಾವಿರ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಯೋಜನೆಯ ಲಾಭ ಪಡೆದುಕೊಳ್ಳಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸಿಮ್ಸ್ ಆಡಳಿತಕ್ಕೆ ತಿಳಿಸಿದರು.
ಸಿಮ್ಸ್‌ನಲ್ಲಿ ಈವರೆಗೆ ನೇಮಕವಾಗದೇ ಖಾಲಿ ಉಳಿದಿರುವ ತಂತ್ರಜ್ಞರು, ತಜ್ಞ ವೈದ್ಯಾಧಿಕಾರಿಗಳ ನೇಮಕ, ಮೂಲ ಸೌಕರ್ಯಕ್ಕೆ ಪೂರಕವಾಗಿ ಅಗತ್ಯವಿರುವ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಶೀಘ್ರ ಪ್ರಸ್ತಾವ ಸಲ್ಲಿಸುವಂತೆ ಸಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಸಭೆಯ ನಂತರ ಸಿಮ್ಸ್ ಕ್ಯಾಂಪಸ್‌ನಲ್ಲಿ ನಿರ್ಮಾಣ ಹಂತದ ಕ್ಯಾನ್ಸರ್ ಆಸ್ಪತ್ರೆಯ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಸುಂದರೇಶ್, ಸಿಮ್ಸ್ ಪ್ರಾಚಾರ್‌ಯ ಕೆ. ರಮೇಶಬಾಬು, ಮುಖ್ಯ ಆಡಳಿತಾಧಿಕಾರಿ ಉಮಾ ಸದಾಶಿವ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ತಿಮ್ಮಪ್ಪ, ಅಧೀಕ್ಷಕ ಸಿದ್ಧನಗೌಡ ಪಾಟೀಲ ಉಪಸ್ಥಿತರಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ. ಇದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಶಿಫಾರಸು ಮಾಡಿದರಷ್ಟೇ ವೆಂಟಿಲೇಟರ್ ಕೊಡಲಾಗುತ್ತದೆ. ಅದನ್ನು ಸರಿಪಡಿಸಿ..ಆರ್.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಮೈಸೂರು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ವೈದ್ಯಕೀಯ ವಿಷಯಗಳಿಗೆ ಪೂರಕವಾಗಿ ಕಿವುಡ ಮತ್ತು ಮೂಕ ಮಕ್ಕಳಿಗೆ ತರಬೇತಿಗೆ ಅವಕಾಶವಿಲ್ಲ. ಶಿವಮೊಗ್ಗದಲ್ಲಿರುವ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸಿಡಾ.ಧನಂಜಯ ಸರ್ಜಿ ವಿಧಾನಪರಿಷತ್ ಸದಸ್ಯ
‘ಸಿಮ್ಸ್‌ನಿಂದ ಮೆಗ್ಗಾನ್ ಆಸ್ಪತ್ರೆ ಪ್ರತ್ಯೇಕಿಸುವುದಿಲ್ಲ’
ಮೆಗ್ಗಾನ್ ಆಸ್ಪತ್ರೆಯನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್)ಯಿಂದ ಪ್ರತ್ಯೇಕಿಸುವುದಿಲ್ಲ. ಅಗತ್ಯಬಿದ್ದರೆ ಶಿವಮೊಗ್ಗಕ್ಕೆ ಮತ್ತೊಂದು ಆಸ್ಪತ್ರೆ ಮಂಜೂರು ಮಾಡಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ ಶನಿವಾರ ಸಿಮ್ಸ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸಂಜೆ 4.30ರವರೆಗೂ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಕ್ರಮ ನಿಶ್ಚಿತ ಎಂದು ಹೇಳಿದ ಅವರು ಸಿಮ್ಸ್‌ನಲ್ಲಿ ಹೊರಗುತ್ತಿಗೆ ಅಡಿ ಕೆಲಸ ಮಾಡುತ್ತಿರುವ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.