ADVERTISEMENT

ಶಿವಮೊಗ್ಗ: ಶಾಲೆಗಳು ಪುನರಾರಂಭ; ಸವಾಲುಗಳು ಹತ್ತಾರು

ಚಂದ್ರಹಾಸ ಹಿರೇಮಳಲಿ
Published 6 ಸೆಪ್ಟೆಂಬರ್ 2021, 9:03 IST
Last Updated 6 ಸೆಪ್ಟೆಂಬರ್ 2021, 9:03 IST
ಶಾಲೆಗೆ ಮರಳಿದ ವಿದ್ಯಾರ್ಥಿನಿಯರು.
ಶಾಲೆಗೆ ಮರಳಿದ ವಿದ್ಯಾರ್ಥಿನಿಯರು.   

ಶಿವಮೊಗ್ಗ: ಸುದೀರ್ಘ ಅವಧಿಯ ನಂತರ ಶಾಲೆಗಳು ಪುನರಾರಂಭಗೊಂಡಿವೆ. ಕೋವಿಡ್‌ ನಿಯಮಾವಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಹಾಗೂ ಶಾಲೆಗಳನ್ನು ನಿರ್ವಹಣೆ ಮಾಡಬೇಕಿರುವ ಗುರುತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಶಾಲೆಗೆ ಬರುವ ಮಕ್ಕಳ ಸುರಕ್ಷತೆಯ ಹತ್ತು ಹಲವು ಸವಾಲುಗಳು ಪೋಷಕರು, ಶಾಲಾ ಆಡಳಿತ ಮಂಡಳಿ, ಸಮುದಾಯದ ಮೇಲಿದೆ. ತರಗತಿಗಳಲ್ಲೂ ಅಂತರ ಕಾಯ್ದುಕೊಳ್ಳುವ ಕಾರಣ ಕೊಠಡಿಗಳ ಸಮಸ್ಯೆ ಎದುರಾಗಿವೆ. ಮಕ್ಕಳು ಮುಖದ ಮೇಲಿನ ಮಾಸ್ಕ್‌ ಸರಿಸದಂತೆ ನಿರಂತರ ನಿಗಾವಹಿಸಬೇಕಿದೆ. ಒಟ್ಟಿಗೆ ಬೆರೆಯದಂತೆ ತಡೆಯುವುದು ಸಾಹಸದ ಕೆಲಸವಾಗಿದೆ ಎನ್ನುವುದು ಬಹುತೇಕ ಶಾಲಾ ಶಿಕ್ಷಕರ ಅನಿಸಿಕೆ.

ಆಗಸ್ಟ್‌ನಲ್ಲಿ 9,10 ಹಾಗೂ ಸೆ.6ರಿಂದ 6,7,8ನೇ ತರಗತಿಗಳು ಆರಂಭವಾಗಿವೆ. ಉಳಿದ ಎಲ್ಲ ತರಗತಿಗಳೂ ಆರಂಭವಾದರೆ ಕೋವಿಡ್‌ ಸುರಕ್ಷತಾ ನಿಯಮಗಳ ಪಾಲನೆ ಮತ್ತಷ್ಟು ಕಷ್ಟಕರವಾಗಲಿದೆ.

ADVERTISEMENT

ವಾಹನ ಸೌಲಭ್ಯವಿಲದಲೆ ಪರದಾಟ: ಮಲೆನಾಡಿನ ಬಹುತೇಕ ಹಳ್ಳಿಗಳಿಗೆ ಇಂದಿಗೂ ಬಸ್‌ ಸೌಕರ್ಯವಿಲ್ಲ. ಮೊದಲೆಲ್ಲ ಮಕ್ಕಳು ಗುಂಪಾಗಿ ಐದಾರು ಕಿ.ಮೀ. ಶಾಲೆಗೆ ನಡೆದುಕೊಂಡು ಬಂದು ಹೋಗುತ್ತಿದ್ದರು. ಈಗ ಕೆಲವು ತರಗತಿಗಳು ನಡೆಯುತ್ತಿವೆ. ಪೂರ್ಣ ಪ್ರಮಾಣದಲ್ಲಿ ಎಲ್ಲ ತರಗತಿಗಳು ತೆರೆಯದ ಕಾರಣ ಕೆಲವೇ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಒಬ್ಬರೇ ಕಾಡು, ಮೇಡುಗಳ ಹಾದಿಯಲ್ಲಿ ನಡೆದು ಬರುವ ಅನಿವಾರ್ಯತೆ ಇದೆ. ಹೆಣ್ಣು ಮಕ್ಕಳ ಸುರಕ್ಷತೆಯ ಖಾತ್ರಿ ಇಲ್ಲದ ಕಾರಣ ಎಷ್ಟೋ ಗ್ರಾಮಗಳಲ್ಲಿ ಶಾಲೆ ಪುನರಾರಂಭವಾದರೂ ಬಾಲಕಿಯರು ಶಾಲೆಗೆ ಬರುತ್ತಿಲ್ಲ. 9, 10ನೇ ತರಗತಿಯ 49,590 ಮಕ್ಕಳು ಶಾಲೆಗೆ ದಾಖಲಾದರೂ, ಶಾಲೆಗೆ ಬರುತ್ತಿರುವವರ ಸಂಖ್ಯೆ 35,146 ಮಾತ್ರ. ಅದರಲ್ಲೂ ಗ್ರಾಮೀಣ ಭಾಗದ ಬಾಲಕಿಯರ ಗೈರು ಎದ್ದುಕಾಣುತ್ತಿದೆ.

ಒಂದು ಬಸ್‌ಗೆ ಶೇ 50 ಮಕ್ಕಳು: ಖಾಸಗಿ ಶಾಲಾ ಬಸ್‌ಗಳಲ್ಲಿ ನಿಯಮದಂತೆ ಸಾಮರ್ಥ್ಯದ ಶೇ 50ರಷ್ಟು ಮಕ್ಕಳನ್ನು ಕರೆತರಬೇಕಿದೆ. ಹೆಚ್ಚಿದ ಡಿಸೀಲ್‌ ದರ, ಒಂದೂವರೆ ವರ್ಷ ಸ್ಥಗಿತಗೊಂಡಿದ್ದ ವಾಹನಗಳ ನಷ್ಟದ ಮಧ್ಯೆ ಸಾಮರ್ಥ್ಯಕ್ಕಿಂತ ಕಡಿಮೆ ಮಕ್ಕಳನ್ನು ಕರೆತರುವುದು ಆಡಳಿತ ಮಂಡಳಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಕೆಲವು ಶಾಲೆಗಳು ವಾಹನಗಳ ಶುಲ್ಕವನ್ನು ಹೆಚ್ಚಳ ಮಾಡಿವೆ. ಇದು ಪೋಷಕರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನೀಗದ ಮಧ್ಯಾಹ್ನದ ಹಸಿವು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭವಾಗಿಲ್ಲ. ಸರ್ಕಾರಿ ಶಾಲೆಗಳಿಗೆ ಬರುವ ಶೇ 50ರಷ್ಟು ಮಕ್ಕಳು ಬೆಳಿಗ್ಗೆ ಸರಿಯಾಗಿ ಊಟ ಮಾಡಿ ಬರುವುದಿಲ್ಲ. ಮಧ್ಯಾಹ್ನವೂ ಬಿಸಿಯೂಟ ಸಿಗುತ್ತಿಲ್ಲ. ಇದರಿಂದ ಮಕ್ಕಳು ಬೇಗನೆ ಬಳಲುವಂತಾಗಿದೆ. ವಿದ್ಯಾರ್ಥಿಗಳ ಖಾತೆಗೆ ಬಿಸಿಯೂಟದ ಹಣ ಜಮೆ ಮಾಡಲಾಗುತ್ತಿದೆ. ಆದರೆ, ಖಾತೆಯ ಹಣ ಮಕ್ಕಳ ಹಸಿವು ನೀಗಿಸಲು ಸಹಕಾರಿಯಾಗಿಲ್ಲ.

ಸಂಕಷ್ಟದಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣ
-ಪಾವನಾ ನೀಚಡಿ

ತ್ಯಾಗರ್ತಿ: ಕೊರೊನಾ ಸಂಕಷ್ಟದ ಮಧ್ಯೆಯೂ ಗ್ರಾಮೀಣ ಶಾಲೆಗಳು ಪುನರಾರಂಭವಾಗಿದ್ದು, ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಕಲ್ಕೊಪ್ಪ ಪ್ರೌಢಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಮಕ್ಕಳ ವಿದ್ಯಾಭ್ಯಾಸದ ಆಸಕ್ತಿ ಹೆಚ್ಚಿಸುವಲ್ಲಿ ಈ ಪ್ರೌಢಶಾಲೆಯ ಶಿಕ್ಷಕರ ಶ್ರಮ ಶ್ಲಾಘನೀಯ. ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೊಪ್ಪ ಸರ್ಕಾರಿ ಪ್ರೌಢಶಾಲೆ 1989–90ರಲ್ಲಿ ಪ್ರಾರಂಭಗೊಂಡು 3 ದಶಕಗಳು ಕಳೆದಿವೆ. ಈ ಶಾಲೆಗೆ 25ಕ್ಕೂ ಹೆಚ್ಚು ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಆದರೆ, ಸಾರಿಗೆ ಸಂಪರ್ಕವಿಲ್ಲದೇ ಕಾಲ್ನಡಿಗೆಯಲ್ಲೇ ಬರುವ ಅನಿವಾರ್ಯ ಇದೆ. 8ರಿಂದ 10ನೇ ತರಗತಿಯವರೆಗೆ 102 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಶಾಲೆಗೆ ಸ್ಥಿರ ದೂರವಾಣಿ ಹಾಗೂ ಮೊಬೈಲ್ ನೆಟ್‌ವರ್ಕ್ ಇಲ್ಲ. ಹಳ್ಳಿಗಳಲ್ಲಿನ ಮಕ್ಕಳಿಗೆ ಶಿಕ್ಷಕರು ನೀಡುವ ಆನ್‌ಲೈನ್ ತರಗತಿಗಳಿಗೆ ಪಾಲ್ಗೊಳ್ಳಲು ಹಾಗೂ ಕುಂದು–ಕೊರತೆಗಳಿಗಾಗಿ ಶಿಕ್ಷಕರು ಸರ್ಕಾರಿ ಕಚೇರಿಯ ಮೇಲಧಿಕಾರಿಗಳನ್ನು ಸಂಪರ್ಕಿಸಲು ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಊರುಗಳಿಂದ ಶಾಲೆಗೆ ಬರಲು ಸಾರಿಗೆ ವ್ಯವಸ್ಥೆಯಿಲ್ಲದೇ ಹಲವಾರು ವಿದ್ಯಾರ್ಥಿಗಳು ಶಾಲೆಯಿಂದಲೇ ದೂರ ಉಳಿದಿದ್ದಾರೆ.

ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇದ್ದಾರೆ. ಆದರೆ, ಶೌಚಾಲಯಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ. ಇರುವ ಹಳೆಯ ಶೌಚಾಲಯ ಶಿಥಿಲಾವಸ್ಥೆ ತಲುಪಿದೆ. ಬಳಸಲು ಯೋಗ್ಯವಾಗಿಲ್ಲ. ದೂರದ ಊರುಗಳಿಂದ ಬರುವ ಮಕ್ಕಳು ಶೌಚಕ್ಕೆ ಹೋಗಲು ಸಮಸ್ಯೆ ಎದುರಿಸುವಂತಾಗಿದೆ.

ಮಕ್ಕಳಿಗೆ ಅನುಗುಣವಾಗಿ ಬೋಧಕ ಸಿಬ್ಬಂದಿ ಕೊರತೆ, ಕೊಠಡಿ ಇಲ್ಲದಿರುವುದು, ಹೆಚ್ಚುವರಿ ಸೈಕಲ್ ತಂಗುದಾಣ ಇಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ಹಾಗೂ ಸಾರಿಗೆ ಸೌಲಭ್ಯಗಳಿದ್ದರೆ ಮಕ್ಕಳು ಆಸಕ್ತಿಯಿಂದ ವಿದ್ಯೆ ಕಲಿಯಲು ಸಹಕಾರಿಯಾಗುತ್ತದೆ ಎನ್ನುವುದು ಪೋಷಕರ ಅಭಿಪ್ರಾಯ.

***

ಶಾಲೆ ಆರಂಭವಾದರೂ ಇಲ್ಲ ಬಸ್‌ ಸೌಕರ್ಯ
-ರಿ.ರಾ.ರವಿಶಂಕರ್

ರಿಪ್ಪನ್‌ಪೇಟೆ: ಕೊರೊನಾ ಕಾರಣ ಸ್ಥಗಿತಗೊಂಡ ಶಾಲೆಗಳು ಪುನಾರಂಭಗೊಂಡಿವೆ. ಆದರೆ ಖಾಸಗಿ ಒಡೆತನದ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಶಾಲೆಗೆ ಬರಲು ನಿತ್ಯವೂ ಪರದಾಡುತ್ತಿದ್ದಾರೆ.

ಮಲೆನಾಡಿನ ಈ ಭಾಗದಲ್ಲಿ ಶೇ 95 ಖಾಸಗಿ ಬಸ್‌ ಸಂಚರಿಸುತ್ತಿದ್ದವು. ಲಾಕ್‌ಡೌನ್‌ ನಂತರ ಬಹುತೇಕ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಶಾಲಾ ವೇಳೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳು ದುಬಾರಿ ಇಂಧನದ ವೆಚ್ಚ, ತೆರಿಗೆ ಹಣ ಕಟ್ಟಲು ಸಾಧ್ಯವಾಗದೆ ನಿಂತ ಜಾಗದಲ್ಲೇ ನಿಂತಿವೆ. ರಿಪ್ಪನ್‌ಪೇಟೆ ಪಟ್ಟಣದಲ್ಲಿ ಸರ್ಕಾರಿ ಶಾಲೆಗಳಿಗೆ ಸುತ್ತ ಮುತ್ತಲ ಹತ್ತಾರು ಹಳ್ಳಿಗಳ ಮಕ್ಕಳು ನಿತ್ಯವೂ 10–12 ಕಿ.ಮೀ. ನಡೆದು ಬರುತ್ತಿದ್ದಾರೆ.

ಸಾಗರ ಕ್ಷೇತ್ರದ ಶಾಸಕ ಎಚ್‌. ಹಾಲಪ್ಪ ಹರತಾಳು ಅವರ ತವರು ಹರತಾಳು ಗ್ರಾಮ ಪಂಚಾಯಿತಿ. ಈ ವ್ಯಾಪ್ತಿಯ ಕೊಡ್ರಿಗೆ, ನಂಜವಳ್ಳಿ, ಹಾಲುಗುಡ್ಡೆ, ಪೂಜಾರ್‌ದಿಂಬ, ಹರತಾಳು, ಗುಡುಗೋಡು, ಶುಂಠಿಕೊಪ್ಪ ಗ್ರಾಮಗಳು ಸೇರಿ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಕಿವರೆ, ಮಸ್ಕಾನಿ, ಹಾರೋಹಿತ್ತಲು, ಗುಬ್ಬಿಗಾ, ಶಂಕ್ರ, ಬಸವಾಪುರ, ಕೋಣನಜಡ್ಡು, ಕೊಳವಂಕ ಹಾಗೂ ಕೆಂಚನಾಲ ಗ್ರಾಮ ಪಂಚಾಯಿತಿಯ ಮಸರೂರು, ಆಲುವಳ್ಳಿ, ಮಾದಾಪುರ, ಕಮದೂರು, ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಹಳ್ಳ, ಕೋಟೆ ತಾರಿಗಾ ಜೇನಿ, ಮತ್ತಲ, ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಬಂದೂರು, ಕಾರಗೋಡು, ಎಡಗುಡ್ಡೆ, ಜಂಬಳ್ಳಿ ಗ್ರಾಮ ಸೇರಿ ದೂರದ ಹಳ್ಳಿ ಗಾಡಿನಿಂದ ಸಾರಿಗೆ ಸಂಪರ್ಕ ಇಲ್ಲದ ಕಾರಣ ಮಕ್ಕಳು ಪ್ರತಿನಿತ್ಯವೂ ನಡೆದು ಬರಬೇಕಿದೆ.

‘ದಟ್ಟಾರಣ್ಯದ ನಡುವೆ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಪ್ರಯಾಣ ಸುರಕ್ಷಿತವಲ್ಲ. ಬದಲಾದ ವೇಳಾಪಟ್ಟಿಯಿಂದ ಜತೆಗಾರರು ಇಲ್ಲದೇ ಕೆಲವೊಮ್ಮೆ ಒಬ್ಬಂಟಿಯಾಗಿ ಹೋಗುವಾಗ ಭಯವಾಗುತ್ತದೆ’ ಎನ್ನುತ್ತಾಳೆ ಸಮೀಕ್ಷಾ ಕಾರಗೋಡು.

‘ಕೊರೊನಾ ನಂತರದಲ್ಲಿ ಶಾಲೆ ಆರಂಭವಾಗಿದ್ದು, ಸಂತೋಷ ತಂದಿದೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದೆ ಪರಿತಪಿಸುವಂತಾಗಿದೆ. ಬಡ ಕೃಷಿ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿರುವ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಉತ್ತಮ’ ಎಂದು ಒತ್ತಾಯಿಸುತ್ತಾಳೆ ವಿದ್ಯಾರ್ಥಿನಿ ಮಧುರಾ.

‘ಬೆಳ್ಳೂರು ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್‌ ಸಂಚಾರ ಆರಂಭಿಸುವಂತೆ ನಾಗರಿಕರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶಾಸಕರು ಈ ಕುರಿತು ವಿಶೇಷ ಆಸಕ್ತಿ ವಹಿಸಬೇಕು’ ಎನ್ನುತ್ತಾರೆ ಹಾರೋಹಿತ್ತಲು ವೀರೇಂದ್ರ.

***

ಕಲ್ಕೊಪ್ಪ ಪ್ರೌಢಶಾಲೆಯ ಶೌಚಾಲಯ ನಿರ್ಮಾಣಕ್ಕೆ ಉದ್ಯೋಗಖಾತ್ರಿ ಯೋಜನೆಯಡಿ ₹ 4 ಲಕ್ಷ ಕ್ರಿಯಾಯೋಜನೆ ರೂಪಿಸಲಾಗಿದೆ. ಅನುಮೋದನೆ ದೊರೆತಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು.
–ಹನೀಫ್, ಬರೂರು ಗ್ರಾಮಪಂಚಾಯಿತಿ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.