ADVERTISEMENT

‘ನರೇಂದ್ರ ಮೋದಿ ರೈಲು ಬಿಡುವ ಪ್ರಧಾನಿ’

ಶಿಕಾರಿಪುರ: ಕಾಂಗ್ರೆಸ್‌ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಲೇವಡಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 12:15 IST
Last Updated 11 ಏಪ್ರಿಲ್ 2019, 12:15 IST
   

ಶಿಕಾರಿಪುರ: ‘ಸ್ವಾತಂತ್ರ್ಯ ನಂತರ ಪ್ರಧಾನಿ ನರೇಂದ್ರ ಮೋದಿಯ ರೀತಿ ರೈಲು ಬಿಡುವ ಪ್ರಧಾನಿ ದೇಶಕ್ಕೆ ಸಿಕ್ಕಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಲೇವಡಿ ಮಾಡಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌– ಜೆಡಿಎಸ್‌ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ಅವರು ದೇಶದ ಜನರಿಗೆ ಹಲವು ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಅಧಿಕಾರ ದೊರೆತ ನಂತರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಜೀವನ ಮಟ್ಟ ಸುಧಾರಿಸುವ ಯೋಜನೆ ತರದೇ ರೈತರಿಗೆ ಸಬ್ಸಿಡಿಗಳನ್ನು ರದ್ದು ಮಾಡಿದ್ದಾರೆ. ರೈತರ ಪರಕರಿಗಳಿಗೆ ಹೆಚ್ಚು ತೆರಿಗೆ ವಿಧಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿಲ್ಲ’ ಎಂದು ಟೀಕಿಸಿದರು.

ADVERTISEMENT
ಶಿಕಾರಿಪುರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಜೆಡಿಎಸ್‌ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿದರು

ಬಿಜೆಪಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ. ಎಲ್ಲ ಜಾತಿ ಧರ್ಮವನ್ನು ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತವನ್ನು ಬಿಜೆಪಿ ಹೊಂದಿಲ್ಲ. ಆದರೆ ಎಲ್ಲಾ ಧರ್ಮ ಹಾಗೂ ಜಾತಿಯ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಡುತ್ತಿವೆ. ಚುನಾವಣೆಯಲ್ಲಿ ಜನರು ಯೋಚನೆ ಮಾಡಿ ಮತ ಚಲಾಯಿಸಬೇಕು. ಜಾತ್ಯತೀತ ತತ್ವದ ಆಧಾರದಲ್ಲಿರುವ ಮೈತ್ರಿ ಅಭ್ಯರ್ಥಿಗೆ ಮತ ಹಾಕಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಸ್‌. ಶಾಂತವೀರಪ್ಪಗೌಡ್ರು, ‘ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ ಯಡಿಯೂರಪ್ಪ ಅವರು ತಾಲ್ಲೂಕಿಗೆ ಪೂರಕ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರ ನೀರಾವರಿ ಯೋಜನೆಗಾಗಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ಆದರೆ ಯಡಿಯೂರಪ್ಪ ಚುನಾವಣೆ ಸಂದರ್ಭ ಲಾಭ ಪಡೆಯಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ಮುಖಂಡರಾದ ನಗರದ ಮಹದೇವಪ್ಪ, ಮರಿಯೋಜಿರಾವ್‌, ಗೋಣಿ ಮಾಲತೇಶ್‌, ಎಚ್‌.ಟಿ. ಬಳಿಗಾರ್‌, ಎಚ್‌.ಪಿ. ನರಸಿಂಗನಾಯ್ಕ, ಸೈಯದ್‌ ಹಬೀಬುಲ್ಲಾ, ಹುಲ್ಮಾರ್‌ ಮಹೇಶ್‌, ಭಂಡಾರಿ ಮಾಲತೇಶ್‌, ಬಡಗಿ ಫಾಲಾಕ್ಷ, ಉಳ್ಳಿದರ್ಶನ್‌, ರಾಘುನಾಯ್ಕ, ಜೀನಳ್ಳಿ ದೊಡ್ಡಪ್ಪ, ಇದ್ರೂಸ್‌ಸಾಬ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.