ADVERTISEMENT

ತೀರ್ಥಹಳ್ಳಿ: ಮೋದಿ ಕುರಿತ ‘ನರೇಂದ್ರ ವಿಜಯ’ ಯಕ್ಷಗಾನ

ಮೊದಲ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿದ ಗಾಯಿತ್ರಿ ಮಹಿಳಾ ಯಕ್ಷಗಾನ ಮಂಡಳಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:27 IST
Last Updated 7 ಜನವರಿ 2020, 15:27 IST
ಜ್ಯೋತಿ ಶಾಸ್ತ್ರಿ
ಜ್ಯೋತಿ ಶಾಸ್ತ್ರಿ   

ತೀರ್ಥಹಳ್ಳಿ: ದೇಶ ಪ್ರೇಮದ ಜೊತೆಗೆ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವ ಕೆಲಸವನ್ನು ತೀರ್ಥಹಳ್ಳಿಯ ಗಾಯಿತ್ರಿ ಮಹಿಳಾ ಯಕ್ಷಗಾನ ಮಂಡಳಿ ಮಾಡಿ ಸೈ ಎನಿಸಿಕೊಂಡಿದೆ.

ಜ. 5ರಂದು ಮಂಗಳೂರಿನ ಟಿ.ಎ. ರಮಣ ಪೈ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕಥೆ ಆಧಾರಿತ ಕಾಲ್ಪನಿಕ ಪ್ರಸಂಗ ‘ನರೇಂದ್ರ ವಿಜಯ’ ಮೊದಲ ಪ್ರದರ್ಶನ ಕಂಡಿದೆ.

ಪಟ್ಟಣ ಸಮೀಪ ಶಿವರಾಜಪುರದ ಜ್ಯೋತಿ ಶಾಸ್ತ್ರಿ ರಚಿಸಿರುವ ‘ನರೇಂದ್ರ ವಿಜಯ’ ಯಕ್ಷಗಾನಕ್ಕೆ, ನಾಗರಕೊಡಿಗೆ ನಾಗೇಶ್ ಕುಲಾಲ್ ನಿರ್ದೇಶನ ಮಾಡಿದ್ದಾರೆ. ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಪದ್ಯ ರಚಿಸಿದ್ದಾರೆ. 15ಕ್ಕೂ ಹೆಚ್ಚು ಕಲಾವಿದರ ತಂಡ ಪ್ರದರ್ಶನ ನೀಡಿದೆ.

ADVERTISEMENT

ಮೋದಿ ಅವರ ಜೀವನ, ಸಾಧನೆಗಳನ್ನು ಯಕ್ಷಗಾನದಲ್ಲಿ ತರಲಾಗಿದೆ. ಅವರು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವುದು, ನೋಟ್ ಬ್ಯಾನ್, ತ್ರಿವಳಿ ತಲಾಕ್, ಕೇದಾರನಾಥ ದರ್ಶನ, ಕಾಶ್ಮೀರ ಸಮಸ್ಯೆ, ಪೌರತ್ವ ತಿದ್ದುಪಡಿ ಕಾಯ್ದೆ, ಚಂದ್ರಯಾನ ಮುಂತಾದ ಮಹತ್ವದ ಬೆಳವಣಿಗೆಯ ಮೇಲೆ ಯಕ್ಷಗಾನ ಬೆಳಕು ಚೆಲ್ಲಿದೆ ಎಂದು ಜ್ಯೋತಿ ಶಾಸ್ತ್ರಿ ಅಭಿಮಾನದಿಂದ ನುಡಿದರು.

ಪ್ರಸಂಗಕ್ಕೆ ಹೊಂದಿಕೆಯಾಗುವಂತೆ ಪಾತ್ರವನ್ನು ಹಂಚಲಾಗಿದೆ. ಅತಿಥಿ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಹವ್ಯಾಸಿ ಕಲಾವಿದರು ತಂಡಕ್ಕೆ ಬೆಂಬಲ ನೀಡಿದ್ದಾರೆ. ‘ನರೇಂದ್ರ ವಿಜಯ’ ಪ್ರಸಂಗದ ಮೊದಲ ಪ್ರದರ್ಶನದ ಸವಿಯನ್ನು ಪ್ರೇಕ್ಷಕರು ಸವಿದರು ಎಂದು ಜ್ಯೋತಿ ಶಾಸ್ತ್ರಿ ತಿಳಿಸಿದರು.

5 ವರ್ಷಗಳ ಹಿಂದೆ ಮಹಿಳಾ ಯಕ್ಷಗಾನ ತಂಡವನ್ನು ರಚಿಸಲಾಗಿದೆ. ನಾಡಿನ ಅನೇಕ ಕಡೆಗಳಲ್ಲಿ ವಿವಿಧ ಪ್ರಸಂಗಗಳ ಪ್ರದರ್ಶನ ನೀಡಲಾಗಿದೆ. ಹವ್ಯಾಸಿ ತಂಡವಾಗಿರುವುದರಿಂದ ವರ್ಷದಲ್ಲಿ 5-6 ಪ್ರದರ್ಶನಕ್ಕೆ ತಂಡವನ್ನು ಸೀಮಿತಗೊಳಿಸುವಂತಾಗಿದೆ. ಹಿಮ್ಮೇಳ ಚೆನ್ನಾಗಿ ಇರುವುದರಿಂದ ಯಕ್ಷಗಾನಕ್ಕೆ ಮೆರುಗು ಬಂತು. ಮಂಗಳೂರು ಕಲಾಪೋಷಕರ, ಕಲಾವಿದ ಊರು. ಅಲ್ಲಿನ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿರುವುದು ಸಂತೋಷ ತಂದಿದೆ ಎನ್ನುತ್ತಾರೆ ಜ್ಯೋತಿ ಶಾಸ್ತ್ರಿ.

ಮಂಗಳೂರಿನಲ್ಲಿ ಪ್ರದರ್ಶನ ನೀಡಿದ ನಂತರ ‘ನರೇಂದ್ರ ವಿಜಯ’ ಯಕ್ಷಗಾನಕ್ಕೆ ಬೇಡಿಕೆ ಬಂದಿದೆ. ಬೆಂಗಳೂರು, ದೆಹಲಿಯಲ್ಲಿ ಪ್ರದರ್ಶನ ನೀಡಲು ಕರೆ ಬಂದಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಎರಡು ಪ್ರದರ್ಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.