ADVERTISEMENT

ಆಶಾ ಕಾರ್ಯಕರ್ತೆ ಅನ್ನಪೂರ್ಣ ಸೇವೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:20 IST
Last Updated 9 ಜುಲೈ 2020, 16:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಮಿಷನ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶಿವಮೊಗ್ಗ ತುಂಗಾನಗರದ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

ಕೊರೊನ ಸಂಕಷ್ಟದ ಸಮಯದಲ್ಲಿ ಪಿಪಿಇ ಕಿಟ್‌ ಧರಿಸಿ ಜನರಿಗೆ ಧೈರ್ಯ ತುಂಬುವ ಹಾಗೂ ಕಂಟೈನ್ಮೆಂಟ್ ಜೋನ್‌ನಲ್ಲಿ ಕೋವಿಡ್‌ ನಿಯಮಾವಳಿ ಪಾಲಿಸಲು ತಿಳಿ ಹೇಳುವ ಕೆಲಸ ಅವಿಸ್ಮರಣೀಯ. ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

ಪ್ರತಿ ಜಿಲ್ಲೆಯಲ್ಲೂ ಇಂತಹ ಒಬ್ಬರ ಕೆಲಸ ಗುರುತಿಸಿ, ಪ್ರಶಂಸಿಸುವ ಕೆಲಸವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಮಾಡುತ್ತಿದೆ. ಜಿಲ್ಲೆಯಲ್ಲೇ ಮೊದಲ ಕಂಟೈನ್ಮೆಂಟ್ ಜೋನ್ ತುಂಗಾನಗರ. ಅಲ್ಲಿ 265 ಮನೆಗಳಿವೆ. ಅಲ್ಲಿನ ಪ್ರತಿ ಮನೆಗಳಿಗೂ ತೆರಳಿ ವೃದ್ಧರು, ಮಕ್ಕಳು ಸೇರಿದಂತೆ ನಿತ್ಯವೂ ಆರೋಗ್ಯ ಮಾಹಿತಿ ಕಲೆ ಹಾಕಿದ್ದಾರೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಸಮಾಜದ ಒಳಿತಿಗೆ ಕೆಲಸ ಮಾಡಿದ್ದಾರೆ.

ADVERTISEMENT

‘ಸೇವೆ ಗುರುತಿಸಿರುವುದು ಖುಷಿ ತಂದಿದೆ. ತುಂಗಾ ನಗರದಲ್ಲಿ ಶ್ರಮಿಕರೇ ಹೆಚ್ಚಾಗಿದ್ದಾರೆ. ಸೀಲ್‌ಡೌನ್‌ ಮಾಡಿದ ಪರಿಣಾಮ ಅವರಿಗೆ ಸಿಟ್ಟು ಬಂದಿತ್ತು. ತಾಳ್ಮೆ ಕಳೆದುಕೊಂಡಿದ್ದರು. ಮನೆಗಳಿಗೆ ಹೋದ ತಕ್ಷಣ ಜಗಳಕ್ಕೆ ಬರುತ್ತಿದ್ದರು. ಪೊಲೀಸರು, ಹಿರಿಯ ಅಧಿಕಾರಿಗಳ ಸಹಕಾರ ಪಡೆದು ಎಲ್ಲವನ್ನೂ ಪ್ರೀತಿ, ತಾಳ್ಮೆಯಿಂದ ನಿರ್ವಹಿಸಿದೆ’ ಎಂದು ಅನ್ನಪೂರ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.