ಶಿಕಾರಿಪುರ: ವಿಠಲನನ್ನು ಒಲಿಸಿಕೊಳ್ಳಲು ನಿರ್ಮಲ ಭಕ್ತಿ, ಭಜನೆ ಮೂಲಕ ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ನಾಮದೇವ ಸಿಂಪಿ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಸದೃಢ ಸಂಘಟನೆ ಮೂಲಕ ಅದನ್ನು ಪಡೆಯಬಹುದು ಎಂದು ನಾಮದೇವ ಸಿಂಪಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ವಿ. ಕೋರ್ಪಡೆ ಹೇಳಿದರು.
ಪಟ್ಟಣದ ವಿಠಲ ದೇವಸ್ಥಾನದಲ್ಲಿ ಭಾನುವಾರ ನಾಮದೇವ ಸಿಂಪಿ ಸಮುದಾಯ ಆಯೋಜಿಸಿದ್ದ ನವಚಂಡಿಕಾ ಯಾಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರಿದ್ದರೂ ರಾಜಕೀಯ ಪ್ರಾತಿನಿಧ್ಯ ನಮಗೆ ಸಿಕ್ಕಿಲ್ಲ. ಮೀಸಲಾತಿಯಲ್ಲೂ ನಮಗೆ ಸರಿಯಾದ ಅವಕಾಶ ಸಿಗಬೇಕು, ಅಭಿವೃದ್ಧಿ ಮಂಡಳಿ ರಚಿಸಬೇಕು ಎನ್ನುವುದು ನಮ್ಮ ಒತ್ತಾಯ. ಸ್ಥಳೀಯ ಸಮುದಾಯ ಉತ್ತಮವಾಗಿ ಸಂಘಟಿತವಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಹೀಗೆ ಎಲ್ಲೆಡೆ ನಾವು ಸಂಘಟಿತರಾಗಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವುದಕ್ಕೆ ಆದ್ಯತೆ ನೀಡಬೇಕು. ಆಗ ನಮ್ಮ ಸಮಾಜವೂ ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಾನಮಾನ ಪಡೆಯಲಿದೆ ಎಂದರು.
ಸಮುದಾಯದ ವತಿಯಿಂದ ನಿರ್ಮಿಸುತ್ತಿರುವ ಸಂತ ನಾಮದೇವ ಭವನ ನಿರ್ಮಾಣಕ್ಕೆ ಎಲ್ಲರೂ ಕೈಲಾದ ಸಹಕಾರ ನೀಡಬೇಕು ಎಂದು ನಾಮದೇವ ಸ್ಥಳೀಯ ಘಟಕ ಅಧ್ಯಕ್ಷ ನಾರಾಯಣರಾವ್ ಸದರೆ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಬೆಳಗ್ಗೆ ಗುರುಗಣಪತಿ ಪೂಜೆ, ಕಲಶ ಪೂಜೆ, ನವಚಂಡಿಕಾ ಯಾಗ, ಪೂರ್ಣಾಹುತಿ ನಂತ ಅನ್ನಸಂತರ್ಪಣೆ ನಡೆಯಿತು. ಮುಖಂಡರಾದ ವಿಠಲ ಮಹೇಂದ್ರಕರ್, ಲಕ್ಷ್ಮಣ, ಮಧುಕೇಶ್ವರ, ಶ್ರೀನಿವಾಸ, ಶಿವಾನಂದ, ಸಂತೋಷ್ ಶಿಗ್ಗಂವಕರ್, ರಮೇಶ ರಾಕುಂಡಿ, ಅನಿತಾ, ರಾಜೀವ ಪೇಟ್ಕರ್. ನಾಮದೇವ ಸಿಂಪಿ ಕ್ಷೇಮಾಭಿವೃದ್ಧಿ ಮಂಡಳಿ, ಕಟ್ಟಡ ಸಮಿತಿ, ಯುವಕ ಮಂಡಳಿ, ಭಜನಾ ಮಂಡಳಿ, ಸಮಾಜದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.