ಸಾಗರ: ಹವಾಮಾನ ವೈಪರೀತ್ಯದಿಂದ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಪ್ಪಳಿ-ಲಿಂಗದಹಳ್ಳಿ ಗ್ರಾಮದಲ್ಲಿ ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಈಚೆಗೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಹವಾಮಾನ ವೈಪರೀತ್ಯ ಪ್ರಕೃತಿಯು ನಮಗೆ ನೀಡುತ್ತಿರುವ ಎಚ್ಚರಿಕೆ ಗಂಟೆಯಾಗಿದೆ. ಆದರೂ ಸರ್ಕಾರದ ಪ್ರಮುಖ ಸ್ಥಾನಗಳಲ್ಲಿರುವವರು ಹಾಗೂ ಕೆಲ ಸ್ವಯಂಘೋಷಿತ ತಜ್ಞರು ಏನೂ ಆಗಿಯೇ ಇಲ್ಲ ಎಂದು ಬಿಂಬಿಸಲು ಹೊರಟಿರುವುದು ಬೇಸರದ ಸಂಗತಿ ಎಂದರು.
ಕೆಲವು ವರ್ಷಗಳಿಂದ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಕೆಲವೇ ದಿನಗಳ ಅವಧಿಯಲ್ಲಿ ಹಲವು ದಿನಗಳಲ್ಲಿ ಆಗುವ ಮಳೆ ಸುರಿಯುತ್ತಿದೆ. ಚಳಿಗಾಲದಲ್ಲಿ ಚಳಿಯ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ಇದು ಸಾಮಾನ್ಯ ಸಂಗತಿಯೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡಲಾಗುತ್ತಿದೆ. ಕಡಿತಲೆ ಮಾಡಲಾದ ಮರಗಳ ಸ್ಥಾನದಲ್ಲಿ ಬದಲಿಯಾಗಿ ಸಸಿಗಳನ್ನು ನೆಡುವ ಕೆಲಸ ನಡೆಯುತ್ತಿಲ್ಲ. ಅಭಿವೃದ್ಧಿಯ ಕುರಿತ ಪರಿಕಲ್ಪನೆ ಬದಲಾಗಿ ಪರಿಸರಸ್ನೇಹಿ ಅಭಿವೃದ್ಧಿ ಮಾದರಿಗಳನ್ನು ನಮ್ಮದಾಗಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಮುಖರಾದ ಸುರೇಶ್, ಸಂದೀಪ್ ಎಸ್.ನಾಯ್ಕ್, ಗುರುಮೂರ್ತಿ ಚಿಪ್ಪಳಿ, ವಾಣಿಶ್ರೀ, ಸತೀಶ್ ಎಲ್.ವಿ. ಅಶೋಕ ಎಲ್.ವಿ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.