
ಶಿವಮೊಗ್ಗ: ‘ರಾಜ್ಯದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಪೂರಕವಾಗಿ 200 ಹೊಸ ಹಾಸ್ಟೆಲ್‌ಗಳನ್ನು ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರೂ ಆದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಗರದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಅನುದಾನದಿಂದ ನಿರ್ಮಿಸಲಾದ ಹಾಸ್ಟೆಲ್ ಕಟ್ಟಡಕ್ಕೆ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳ ಕೊರತೆಯಾಗಿ ಸ್ಥಗಿತಗೊಂಡಿತ್ತು. ನಂತರ ಅದನ್ನು ಹಿಂದುಳಿದ ವರ್ಗಗಳ ಇಲಾಖೆ ವಶಕ್ಕೆ ಪಡೆದು, ಅಭಿವೃದ್ಧಿಪಡಿಸಿದೆ. ಆ ಕಟ್ಟಡವನ್ನು ವಾಪಸ್ ಪರಿಶಿಷ್ಟ ಜಾತಿಯ ಹಾಸ್ಟೆಲ್‌ಗೆ ಬಿಟ್ಟುಕೊಟ್ಟು, ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಹಾಸ್ಟೆಲ್‌ಗಳಿಂದ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಓಡಾಟ ನಡೆಸಲು ಅನುಕೂಲವಾಗುವಂತೆ ಬಸ್ ಸಂಪರ್ಕ ಕಲ್ಪಿಸುವಂತೆ ಅವರು ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮಹತ್ವದ ಬದಲಾವಣೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿ ಹಾಸ್ಟೆಲ್ ಸೀಟ್‌ಗೆ ಬೇಡಿಕೆ ಅಧಿಕವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಕೊರತೆಯಿಂದ ಖಾಲಿ ಇರುವ ಹಾಸ್ಟೆಲ್ ಕಟ್ಟಡಗಳನ್ನು ಅಗತ್ಯವಿರುವ ಇಲಾಖೆಯ ಹಾಸ್ಟೆಲ್‌ಗಳಿಗೆ ಹಸ್ತಾಂತರಿಸುವಂತೆ ಅವರು ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಶಾಲೆ–ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಬೇಕು. ವಿದ್ಯಾರ್ಥಿಗಳು ಗಾಂಜಾ, ಅಫೀಮು ಬಲೆಗೆ ಬೀಳದಂತೆ ಅವರ ಭವಿಷ್ಯದ ಜೀವನ ಹಾಳಾಗದಂತೆ ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ಗುರುರಾಜ ಗಂಟಿಹೊಳಿ, ಅಬ್ದುಲ್ ಜಬ್ಬಾರ್, ಎಸ್.ಎಫ್.ಜಕ್ಕಪ್ಪನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಉಪಸ್ಥಿತರಿದ್ದರು.
ಹಾಸ್ಟೆಲ್ ಪ್ರವೇಶಕ್ಕೆ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಇತರೆ ವಿದ್ಯಾರ್ಥಿಗಳ ಪ್ರವೇಶಕ್ಕೂ ಅವಕಾಶ ಒದಗಿಸಬೇಕುಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ಶಾಸಕ
ಶೈಕ್ಷಣಿಕ ಸಾಲಿನ ಮುಕ್ತಾಯದ ಸಂದರ್ಭದಲ್ಲಿ ಹಾಸ್ಟೆಲ್‌ಗಳ ನಿರ್ವಹಣಾ ಕಾರ್ಯ ಸ್ಥಗಿತಗೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಆ ಲೋಪ ಸರಿಪಡಿಸಿಡಾ. ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯ
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಊಟೋಪಹಾರದಲ್ಲಿ ಗುಣಮಟ್ಟದ ಕೊರತೆ ಇರುವ ಬಗ್ಗೆ ಆಗಾಗ್ಗೆ ದೂರುಗಳ ಕೇಳಿ ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕುಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ
ವಾದಿ-ಎ-ಹುದಾ ಲಷ್ಕರ್‌ಮೊಹಲ್ಲಾ ಆರ್.ಎಂ.ಎಲ್. ನಗರ ಸೇರಿದಂತೆ ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕೊರತೆಯಿದ್ದು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕುಬಲ್ಕೀಶ್ ಬಾನು ವಿಧಾನ ಪರಿಷತ್ ಸದಸ್ಯೆ
ಹಾಸ್ಟೆಲ್‌ಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಿದರೆ ಹೇಗೆ? ಪರ ಊರುಗಳ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿಜಿ.ಎಚ್.ಶ್ರೀನಿವಾಸ್ ತರೀಕೆರೆ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.