ಸಾಗರ: ಆರೋಗ್ಯ ಸುಧಾರಿಸಲು ಪೂಜೆ ಮಾಡಿಸುವುದಾಗಿ ಹೇಳಿ ತಾಲ್ಲೂಕಿನ ಹೊನ್ನೇಸರ ಗ್ರಾಮದ ವಿನಾಯಕ ಅವರ ಮನೆಯಲ್ಲಿ ಬಂಗಾರದ ಆಭರಣಗಳನ್ನು ಮೋಸದಿಂದ ಎತ್ತಿಕೊಂಡು ಹೋಗಿದ್ದ ನಕಲಿ ಸ್ವಾಮೀಜಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಾನಗಲ್ ತಾಲ್ಲೂಕಿನ ಹೊಂಬ್ಳಿ ಗ್ರಾಮದ ಬಸಯ್ಯ ಹಿರೇಮಠ ಬಂಧಿತ ಆರೋಪಿ. ಕಳೆದ ಮಾರ್ಚ್ 23ರಂದು ಹೊನ್ನೇಸರ ಗ್ರಾಮದ ವಿನಾಯಕ ಅವರ ಪತ್ನಿ ಶೈಲಜಾ ಅವರ ಆರೋಗ್ಯ ಸುಧಾರಿಸಲು ಐದು ಗ್ರಾಂ ತೂಕದ ಉಂಗುರ, 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಹಿಟ್ಟಿನ ಗೊಂಬೆಯೊಳಗೆ ಇಟ್ಟು ಪೂಜೆ ಮಾಡಬೇಕು ಎಂದು ಬಸಯ್ಯ ಹಿರೇಮಠ ಹೇಳಿದ್ದರು.
ಇದನ್ನು ನಂಬಿದ ಶೈಲಜಾ ಅವರು ತಮ್ಮ ಬಂಗಾರದ ಆಭರಣಗಳನ್ನು ಆರೋಪಿಗೆ ನೀಡಿದ್ದರು. ತದನಂತರ ಆರೋಪಿ ಆಭರಣಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯ ಜಾಡು ಪತ್ತೆ ಹಚ್ಚಿದ ಪೊಲೀಸರು ಆಭರಣಗಳ ಸಮೇತ ದಸ್ತಗಿರಿ ಮಾಡಿದ್ದಾರೆ.
ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯ್ಕ, ಇನ್‌ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ, ಸಿದ್ಧರಾಮಪ್ಪ, ಸಿಬ್ಬಂದಿ ಶೇಕ್ ಫೈರೋಜ್ ಅಹಮ್ಮದ್, ರವಿಕುಮಾರ್, ನಂದೀಶ್, ಪ್ರವೀಣ್ ಕುಮಾರ್, ಹನುಮಂತ ಜಂಬೂರು, ಇಂದ್ರೇಶ್, ವಿಜಯ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.