ADVERTISEMENT

‍ಶರಾವತಿ ಪಂಪ್ಡ್ ಸ್ಟೋರೇಜ್: ವಿನಾಕಾರಣ ವಿರೋಧ ಸಲ್ಲ

ಪರಿಸರವಾದಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:42 IST
Last Updated 14 ಸೆಪ್ಟೆಂಬರ್ 2024, 15:42 IST
ಕಾರ್ಗಲ್ ಸಮೀಪದ ಜೋಗದ ಯೂತ್ ಹಾಸ್ಟೆಲ್ ಬಳಿ ಶುಕ್ರವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿದರು
ಕಾರ್ಗಲ್ ಸಮೀಪದ ಜೋಗದ ಯೂತ್ ಹಾಸ್ಟೆಲ್ ಬಳಿ ಶುಕ್ರವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿದರು   

ಕಾರ್ಗಲ್: ‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಸಾಧಕ ಬಾಧಕಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ಅಧ್ಯಯನ ಮಾಡಿ ನಂತರ ಪರಿಸರವಾದಿಗಳು ವಿರೋಧಿಸಬೇಕೇ ಹೊರತು, ಸುಮ್ಮನೆ ವಿರೋಧಿಸುವುದು ಸರಿಯಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಜೋಗದ ಯೂತ್ ಹಾಸ್ಟೆಲ್ ಪ್ರಾಂಗಣದಲ್ಲಿ ಶುಕ್ರವಾರ ಕಟ್ಟಡದ ದುರಸ್ತಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯದ ನಡುವೆ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ₹ 8,664 ಕೋಟಿ ವೆಚ್ಚದಲ್ಲಿ ನಿರ್ಮಾಣ ಯೋಜನೆಯ ಅಂದಾಜು ಮಾಡಲಾಗಿದೆ. ಈ ಯೋಜನೆಯಿಂದ 2 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯ ಎಂದರು.

ADVERTISEMENT

‘ಜೋಗ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಒಂದು ಕಾಲದಲ್ಲಿ ವಸತಿ ವ್ಯವಸ್ಥೆಯನ್ನು ಪೂರೈಸುತ್ತಿದ್ದ ಯೂತ್ ಹಾಸ್ಟೆಲ್ ಅಧಿಕಾರಸ್ಥರ ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ. ಪಾಳು ಬಿದ್ದ ಕಟ್ಟಡವನ್ನು ದುರಸ್ತಿ ಮಾಡಲು ₹ 90 ಲಕ್ಷ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

‘ಹಿಂದಿನ ಶಾಸಕರು ಮತ್ತು ಹಾಲಿ ಸಂಸದರು ಜೋಗದ ಅಭಿವೃದ್ಧಿಗೆ ಯಾವುದೇ ಅನುದಾನ ತಾರದೇ ಪುಕ್ಕಟ್ಟೆ ಪ್ರಚಾರಕ್ಕಾಗಿ   ಮಾತನಾಡುತ್ತಿದ್ದಾರೆ. ಜೋಗದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಶೂನ್ಯ’ ಎಂದರು.

‌ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮಿ ಲಕ್ಷಣ, ಸದಸ್ಯರಾದ ಪಿ. ಮಂಜುನಾಥ, ಸುಜಾತಾ ಜೈನ್, ಲಕ್ಷ್ಮೀ ರಾಜು, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಮುಖಂಡರಾದ ಎಸ್.ಎಲ್. ರಾಜಕುಮಾರ್, ಬಿ. ಉಮೇಶ್, ಶ್ರೀಧರ ಲಿಂಗನಮಕ್ಕಿ, ಕೆ. ವಿಜಯಕುಮಾರ್, ಎಚ್.ಎಸ್. ಸಾದಿಕ್‌, ಗುರುಮೂರ್ತಿ, ಲೋಕೇಶ್ ಇದ್ದರು.

ಜೋಗದಲ್ಲಿ ಪಂಚತಾರಾ ಹೋಟೆಲ್‌ ಕೇಬಲ್ ಕಾರು!

ಜೋಗವನ್ನು ಸರ್ವ ಋತು ಪ್ರವಾಸಿ ತಾಣವಾಗಿಸಲು ₹300 ಕೋಟಿ ವೆಚ್ಚದಲ್ಲಿ ಖಾಸಗಿ ಮತ್ತು ಸರ್ಕಾರದ ಪಾಲುದಾರಿಕೆಯಲ್ಲಿ 500 ಕೊಠಡಿಗಳ ವ್ಯವಸ್ಥೆಯ ಪಂಚತಾರ ಹೋಟೆಲ್ ನಿರ್ಮಾಣ ಮಾಡಲಾಗುವುದು. ಪಿಡಬ್ಲ್ಯುಡಿ ನಿರೀಕ್ಷಣಾ ಗೃಹದಿಂದ ಬಾಂಬೆ ಟಿಬಿಗೆ ಕೇಬಲ್ ಕಾರು ಜೋಡಣೆಗೆ ಈಗಾಗಲೇ ಯೋಜನೆ ಸಿದ್ಧವಾಗಿದೆ. ತಾಂತ್ರಿಕ ಪರಿಶೀಲನಾ ಹಂತದಲ್ಲಿದೆ. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯ ಹಲವು ಮಾದರಿಗಳನ್ನು ಜೋಗದಲ್ಲಿ ಅಳವಡಿಸಲಾಗುವುದು ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.