ADVERTISEMENT

ಬಂಜರು ಭೂಮಿ ಕಬಳಿಸಲು ಅರಣ್ಯಕ್ಕೆ ಬೆಂಕಿ: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:53 IST
Last Updated 14 ಮಾರ್ಚ್ 2024, 15:53 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಹೊಳೆಮರೂರು ಗ್ರಾಮದಲ್ಲಿ ಅರಣ್ಯಭೂಮಿ ಸಾಗುವಳಿಗಾಗಿ ಕಾಡಿಗೆ ಬೆಂಕಿ‌ ಹಚ್ಚಿರುವುದು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಹೊಳೆಮರೂರು ಗ್ರಾಮದಲ್ಲಿ ಅರಣ್ಯಭೂಮಿ ಸಾಗುವಳಿಗಾಗಿ ಕಾಡಿಗೆ ಬೆಂಕಿ‌ ಹಚ್ಚಿರುವುದು   

ಸೊರಬ: ಸರ್ಕಾರಿ ಬಂಜರು ಭೂಮಿಯನ್ನು ಕಬಳಿಸುವ ಉದ್ದೇಶದಿಂದ ದಟ್ಟವಾಗಿ ಬೆಳೆದಿರುವ ಮರಗಿಡಗಳಿಗೆ ಬೆಂಕಿ‌ ಹಚ್ಚಿರುವ ಘಟನೆ ತಾಲ್ಲೂಕಿನ ಹೊಳೆಮರೂರು ಗ್ರಾಮದಲ್ಲಿ ನಡೆದಿದೆ.

ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಪುಡಿ ರಾಜಕಾರಣಿಗಳಿಂದಾಗಿ ಮಲೆನಾಡು ಬಯಲು ಸೀಮೆ ಆಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಪರಿಸರದ ಮೇಲೆ ಪ್ರಹಾರ ನಡೆಯುತ್ತಿದ್ದು, ಕಳ್ಳ ದಂಧೆಗಾಗಿ ಕಾಡುಪ್ರಾಣಿಗಳ ಹತ್ಯೆ, ಬಗರ್‌ಹುಕುಂ ಭೂಮಿ‌ ಕಬಳಿಸಲು ಅರಣ್ಯ ನಾಶದಂತಹ ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ ನೀರಿನ ಮೂಲದ ಬುಡಕ್ಕೆ ಕೊಡಲಿ ಹಾಕುತ್ತಿರುವುದು ಹೇಯ ಕೃತ್ಯ. ಕಂದಾಯ ಇಲಾಖೆ ಕುಮ್ಮಕ್ಕಿನಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬೆಂಕಿಯ ಕೆನ್ನಾಲಿಗೆಗೆ ಆಳತ್ತೆರದ ನೂರಾರು ಮರಗಳು ಆಹುತಿಯಾಗಿವೆ. ಸರ್ವೆ ನಂ.120ರಲ್ಲಿ 450 ಎಕರೆ ದಟ್ಟ ಅರಣ್ಯ ಪ್ರದೇಶವಿದೆ. ಮರಗಳ್ಳರು ಬಹಳ ದಿನಗಳಿಂದ ರಾತ್ರಿ ವೇಳೆ ಅರಣ್ಯ ಕಡಿತಲೆ ಮಾಡುತ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಸ್ವತ್ತು ಉಳಿಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ ರಮೇಶ್, ‘ಈ ಜಾಗ ಯಾರಿಗೂ ಮಂಜೂರು ಮಾಡಿಲ್ಲ. ಮರಕಡಿತಲೆ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಗ್ರಾಮಸ್ಥರಾದ ಗಂಗಾಧರ್, ಚಂದ್ರಶೇಖರಗೌಡ, ಸುಬ್ರಹ್ಮಣ್ಯ, ವಿರೇಂದ್ರ ಪಾಟೀಲ್, ಉದಯ ಕಾನಡೆ, ಉಮೇಶ, ಮಂಜುನಾಥ್, ಅಜಿತ್, ಅಶೋಕ, ಶಿವಕುಮಾರಗೌಡ, ರವಿ, ಆದರ್ಶ, ಪರಶುರಾಮ, ಜಯರಾಮ, ವಸಂತ, ಸಚಿನ್ ಪಾಟೀಲ್, ಕುಮಾರ್ ಗೌಡರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.