ತುಮರಿ: ಗುಣಮಟ್ಟದ ಶಿಕ್ಷಣದ ಜೊತೆಗೆ ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿರುವ ತುಮರಿ ಕಾಲೇಜಿಗೆ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ಮೂಲಕ ಕಾಲೇಜು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಓಂಕಾರ ಮುರಕ್ಕಿ ತಿಳಿಸಿದರು.
ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಶೇ 100 ಫಲಿತಾಂಶದೊಂದಿಗೆ ಜಿಲ್ಲೆಯ ಪದವಿಪೂರ್ವ ಕಾಲೇಜುಗಳಲ್ಲಿಯೇ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಪ್ರಸಕ್ತ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಯಾವ ವಿಭಾಗಕ್ಕೆ ಏನೇನು ಅವಶ್ಯಕತೆ ಇದೆ ಎಂಬುದನ್ನು ಚರ್ಚೆ ನಡೆಸಲಾಗಿದೆ. ಖಾಸಗಿ ಕಾಲೇಜುಗಳಂತೆ ನಮ್ಮ ಕಾಲೇಜಿನಲ್ಲೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಲೇಜಿನಲ್ಲಿ ಅನುಭವಿ ಬೋಧಕರ ಕ್ರಿಯಾಶೀಲ ತಂಡವಿದ್ದು, ಗ್ರಾಮೀಣಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕಾಲೇಜಿನಲ್ಲಿ ಸಾಕಷ್ಟು ಉತ್ತಮ ಕೋರ್ಸ್‌ಗಳಿದ್ದು, ಈ ವರ್ಷದಿಂದ ಕಂಪ್ಯೂಟರ್ ಕಾಮರ್ಸ್ ಆರಂಭಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಪ್ರಭಾರ ಪ್ರಾಂಶುಪಾಲ ಹರೀಶ್, ಸಿಡಿಸಿ ಸಮಿತಿಯ ಸುಧಾಕರ, ಜೋಸೆಫ್, ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.