ADVERTISEMENT

ಮತಾಂತರಗೊಂಡಿದ್ದ ಒಂದೇ ಕುಟುಂಬದ 9 ಮಂದಿ ಹಿಂದೂ ಧರ್ಮಕ್ಕೆ ವಾಪಸ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 3:44 IST
Last Updated 27 ಡಿಸೆಂಬರ್ 2021, 3:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭದ್ರಾವತಿ: ಇಲ್ಲಿನ ಅಂತರಗಂಗೆ ಗ್ರಾಮದ ಒಂದೇ ಕುಟುಂಬದ 9 ಮಂದಿ ಮತಾಂತರ ಹೊಂದಿದ್ದು, ಇವರನ್ನು ವಾಪಸ್‌ ಹಿಂದೂ ಧರ್ಮಕ್ಕೆ ಕರೆತರುವ ಧಾರ್ಮಿಕ ಕಾರ್ಯಕ್ರಮ ಭಾನುವಾರ ನಡೆಯಿತು.

ಜನ್ನಾಪುರ ಸಾರ್ವಜನಿಕ ಶ್ರೀರಾಮ ಭಜನಾ ಮಂಡಳಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಒಂಭತ್ತು ಮಂದಿಯನ್ನು ಮರಳಿ ಮಾತೃಧರ್ಮ ಸ್ವೀಕಾರ, ಸಂಸ್ಕಾರಕ್ಕೆ ಸೇರಿಸುವ ಧಾರ್ಮಿಕ ವಿಧಿವಿಧಾನ ನಡೆಯಿತು.

ಈ ವೇಳೆ ಮಾತನಾಡಿದ ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ ‘ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹೆಸರಿನಲ್ಲಿ ಮತಾಂತರ ಮಾಡುವ ಮೂಲಕ ಸಮಾಜದಲ್ಲಿ ಆಶಾಂತಿ ಉಂಟು ಮಾಡುವ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಭಾಗವಾಗಿ ಇಂದು ಈ ಮಾತೃ ಧರ್ಮಕ್ಕೆ ಕರೆತರುವ ಕಾರ್ಯಕ್ರಮ ನಡೆದಿದೆ’ಎಂದರು.

ADVERTISEMENT

‘ಬಡವರ ಬಲಹೀನತೆ ಬಳಕೆ ಮಾಡಿಕೊಂಡು ಅನ್ಯ ಧರ್ಮೀಯರು ವಿದೇಶಿ ಹಣದ ಮೂಲಕ ಅವರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದು, ಇದಕ್ಕೆ ಇತಿಶ್ರೀ ಹಾಡುವ ಕೆಲಸ ನಡೆಯಬೇಕಿದೆ’ಎಂದರು.

‘ಹಿಂದೂ ಧರ್ಮದ ಸಂಸ್ಕಾರ, ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ಆಚರಸಿದರೆ ಶಾಂತಿ, ಸಮೃದ್ಧಿ, ನೆಮ್ಮದಿ ಖಂಡಿತ. ಅದನ್ನು ಬಿಟ್ಟು ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುವುದು ಸರಿಯಲ್ಲ’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಜ್ಯೋತಿಷಿ ಸುರೇಶ್ ಬಾಬು ಮಾತನಾಡಿ ‘ಮತಾಂತರ ಆಗುತ್ತಿರುವ ಬಹಳಷ್ಟು ಜನರು ಸಾಮಾಜಿಕ ತೊಂದರೆ ಎದುರಿಸಿದವರು ಎಂಬುದು ಗಮನಿಸಬೇಕಾದ ಸತ್ಯ ಸಂಗತಿ. ಇವರಿಗೆ ಸರ್ಕಾರ ನೀಡುವ ಎಲ್ಲಾ ದೊರೆಯುವಂತೆ ಮಾಡುವುದು ಸಮಾಜದ ಕೆಲಸ’ಎಂದು ಕರೆ ನೀಡಿದರು.

ಮಾತೃ ಧರ್ಮಕ್ಕೆ ಕರೆತರುವ ಧಾರ್ಮಿಕ ವಿಧಾನದ ಸ್ವಾಗತವನ್ನು ವೇ.ಬ್ರ.ಶ್ರೀ ಕೃಷ್ಣಮೂರ್ತಿ ಸೋಮಯಾಜಿ ನಡೆಸಿಕೊಟ್ಟರು.

ಸೂಡಾ ಸದಸ್ಯ ಬಿ.ಜಿ. ರಾಮ ಲಿಂಗಯ್ಯ, ಯಶೋಧ ಡಾ.ವೀರಭದ್ರಪ್ಪ, ಗಾಯಿತ್ರಿ, ಪಂಚರತ್ನಮ್ಮ, ಸಿದ್ದರಾಮಣ್ಣ, ವಡಿವೇಲು, ಚಂದ್ರಪ್ಪ, ದಿನೇಶ್, ಡಿ.ಆರ್. ಶಿವಕುಮಾರ್, ಭಾ.ನಿ. ಮಹಾದೇವ, ಶಾರದ ಶಿವಮೂರ್ತಿ, ಸತೀಶ, ಸತ್ಯಣ್ಣ, ಪಿ.ಮೂರ್ತಿ, ಎ.ಟಿ. ರವಿ ಹಾಜರಿದ್ದರು.

35 ವರ್ಷಗಳ ಹಿಂದೆಯೇ ಮತಾಂತರ
ಭದ್ರಾವತಿ
: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದ ತಾಲ್ಲೂಕಿನ ಅಂತರಗಂಗೆಯ ಒಂದೇ ಕುಟುಂಬದ 9 ಮಂದಿ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.

‘35 ವರ್ಷಗಳ ಹಿಂದೆ ಅಂತರಗಂಗೆ ಗ್ರಾಮದ ಏಳುಮಲೈ ಎಂಬುವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದರು. ಈಗ ಅವರ ಮಗ ಜಯಶೀಲನ್, ಪತ್ನಿ ಜಯಮ್ಮ, ಅವರ ಮಕ್ಕಳಾದ ಪ್ರಭಾಕರನ್, ಪ್ರಕಾಶ, ಅವರ ಪತ್ನಿಯರಾದ ಲಲಿತ, ಶ್ವೇತಾ, ಇವರ ಮಕ್ಕಳಾದ ಭರತಕುಮಾರ್, ಭಾವನಾ, ಪೃಥ್ವಿ ಅವರು ಮರಳಿ ಹಿಂದೂ ಧರ್ಮ ಸ್ವೀಕಾರ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಏಳುಮಲೈ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರು ಎಂಬ ವಿಚಾರ ಜಯಶೀಲನ್ ಅವರಿಗೂ ತಿಳಿದಿಲ್ಲ’ ಎನ್ನುತ್ತಾರೆ ವಿಎಚ್‌ಪಿ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.