ADVERTISEMENT

ಸೋಮಾರಿತನ ಇದ್ದರೆ ಸಾಧನೆ ಸಾಧ್ಯವಿಲ್ಲ: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಶಾಖಾಮಠದ 35ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 7:08 IST
Last Updated 6 ನವೆಂಬರ್ 2025, 7:08 IST
ಶಿವಮೊಗ್ಗದ ಆದಿಚುಂಚನಗಿರಿ ಶಾಖಾಮಠದ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ 35ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು
ಶಿವಮೊಗ್ಗದ ಆದಿಚುಂಚನಗಿರಿ ಶಾಖಾಮಠದ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ 35ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು   

ಶಿವಮೊಗ್ಗ: ‘ಸೋಮಾರಿತನ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಎಷ್ಟೇ ಓದಿರಲಿ, ಏನೇ ಸಾಧನೆ ಮಾಡಿರಲಿ, ನಮ್ಮಲ್ಲಿ ಸೋಮಾರಿತನ ಜೊತೆಗೂಡಿದಾಗ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಆದಿಚುಂಚನಗಿರಿ ಶಾಖಾಮಠದ ಸಮುದಾಯಭವನದಲ್ಲಿ ಗುರುವಾರ ಆಯೋಜಿಸಿದ್ದ 35ನೇ ವಾರ್ಷಿಕೋತ್ಸವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಧನೆ ಸಿಗಬೇಕೆಂದರೆ ಸೋಮಾರಿತನ ಕೈಬಿಟ್ಟು, ಬದ್ಧತೆ ಹಾಗೂ ಛಲ ಬೆಳೆಸಿಕೊಳ್ಳಬೇಕು. ಅದಕ್ಕೆ ಸಾಕಷ್ಟು ನಿದರ್ಶನಗಳು ಕಾಣಸಿಗುತ್ತವೆ’ ಎಂದರು.

‘ಆದಿಚುಂಚನಗಿರಿ ಮಹಾಸಂಸ್ಥಾನ ಆರಂಭಗೊಂಡು 50 ವರ್ಷಗಳು ಉರುಳಿವೆ. ಮಠ ಕೇವಲ ಸಮಾಜದ ಕಾರ್ಯಕ್ಕೆ ಸೀಮಿತವಾಗದೇ, ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಿ ರಾಜ್ಯದಾದ್ಯಂತ ಲಕ್ಷಾಂತರ ಸಾಧಕರನ್ನು ಹೊರತಂದಿದೆ’ ಎಂದರು.

ADVERTISEMENT

‘ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೊದಲ ಬಾರಿಗೆ ಕೃಷಿ ವಿಜ್ಞಾನ ಕಾಲೇಜು ಆರಂಭಿಸಿದ್ದು, ಅದರ ಮೂಲಕ ನಿರಂತರ ಕೃಷಿ ಸಂಶೋಧನೆಗಳನ್ನು ಕೈಗೊಂಡಿದೆ. ಯಾರೇ ಆಗಲಿ ಸಮಾಜದ ಒಂದು ಮಟ್ಟದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣ ಭಾಗದ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಪ್ರಸನ್ನನಾಥ ಸ್ವಾಮೀಜಿ ಕಾರ್ಯಕ್ಕೆ ಪ್ರಶಂಸೆ

‘ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಚಿಕ್ಕ ಬಾಡಿಗೆ ಮನೆಯೊಂದರಲ್ಲಿ ಮಠ ಆರಂಭಿಸಿದ್ದರು. ಈಗ ಮಠದ ಅಭಿವೃದ್ಧಿಯ ಜೊತೆಗೆ ಒಂದೇ ಸಮಾಜಕ್ಕೆ ಮೀಸಲಾಗದೇ 15000ಕ್ಕೂ ಹೆಚ್ಚು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕೆ ಪ್ರಸನ್ನನಾಥ ಸ್ವಾಮೀಜಿ ಅವರ ಛಲ ಹಾಗೂ ಕರ್ತವ್ಯ ಬದ್ಧತೆಯೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ’ ಎಂದು ನಿರ್ಮಲಾನಂದ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ.. 

ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಗುಂಡಪ್ಪ ಗೌಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ಪ್ರೊ.ಕೆ.ಪುಟ್ಟರಂಗಪ್ಪ ವಕೀಲ ಅಶೋಕ ಜಿ.ಭಟ್ ಉದ್ಯಮಿ ಎಂ.ಜಿ.ಬಾಲಕೃಷ್ಣ ಕೇಂದ್ರ ಸರ್ಕಾರದ ವಿಶೇಷ ಅಧಿಕಾರಿ ಡಿ.ರವಿಕುಮಾರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಎಸ್.ವಿ.ಸುರೇಶ್ ಎಂ.ನಾಗರಾಜ್ ಸಾಧನೆ ಪರಿಗಣಿಸಿ ನಿರ್ಮಲಾನಂದ ಸ್ವಾಮೀಜಿ ಸನ್ಮಾನಿಸಿದರು.