ADVERTISEMENT

ಕಾಂಗ್ರೆಸ್‌ ಸೇರಲು ತಯಾರಿರುವ ಬಿಜೆಪಿಯ ಒಬ್ಬ ಶಾಸಕರ ಹೆಸರು ಹೇಳಲಿ: ಈಶ್ವರಪ್ಪ 

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 9:22 IST
Last Updated 26 ಜನವರಿ 2022, 9:22 IST
ಈಶ್ವರಪ್ಪ 
ಈಶ್ವರಪ್ಪ    

ಚಿಕ್ಕಮಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಲು ಸಿದ್ಧ ಇರುವ ಬಿಜೆಪಿಯ ಒಬ್ಬ ಶಾಸಕರ ಹೆಸರನ್ನಾದರೂ ಹೇಳಬೇಕು, ಪುಕ್ಸಟ್ಟೆ ಮಾತನಾಡಬಾರದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಛೇಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಕಾಂಗ್ರೆಸ್‌ ಸೇರಲು ಎಷ್ಟು ಮಂದಿ ಸಂಪರ್ಕಿಸಿದ್ದಾರೆ, ಯಾರ್ಯಾರು ಎಂಬುದನ್ನು ಹೇಳಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ ಕೊಳೆತ ಹಣ್ಣು, ಬಿಜೆಪಿಯು ಮೋದಿ ನೇತೃತ್ವದ ಸೇಬು ಹಣ್ಣು. ಕೊಳೆತ ಹಣ್ಣನ್ನು ಯಾರಾದರೂ ಇಷ್ಟಪಡುತ್ತಾರಾ? ಕಾಂಗ್ರೆಸ್‌ಗೆ ಬೇಡಿಕೆ ಸೃಷ್ಟಿಸಿಕೊಳ್ಳಲು ಈ ರೀತಿ ಆಟವಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸೋನಿಯಾ ಗಾಂಧಿ ಅವರಿಗೆ ತೋರಿಸಿಕೊಳ್ಳಲು, ಅಸ್ತಿತ್ವ ಪ್ರದರ್ಶನಕ್ಕೆ ಈ ರೀತಿಯ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕ ಅಥವಾ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಅವರು ಕಾಂಗ್ರೆಸ್‌ನಲ್ಲಿ ಇರಲ್ಲ. ರಾಷ್ಟ್ರ ರಾಜಕಾರಣಕ್ಕೆ ಸೋನಿಯಾ ಗಾಂಧಿ ಆಹ್ವಾನಿಸಿದರೂ ಸಿದ್ದರಾಮಯ್ಯ ಹೋಗಿಲ್ಲ. ಸಿದ್ದರಾಮಯ್ಯ ಅವರು ಕರ್ನಾಟಕ ಬಿಟ್ಟು ಹೋಗಲ್ಲ, ಇವರೆಲ್ಲ ಸ್ವಾರ್ಥಿಗಳು’ ಎಂದು ಕುಹಕವಾಡಿದರು.

ADVERTISEMENT

‘ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್‌ನಲ್ಲಿದ್ದ ಮಹಾಪುರುಷರು ಎಲ್ಲ ಹೋದರು. ಈಗ ಕಾಂಗ್ರೆಸ್‌ ಗೆದ್ದಲು ಹಿಡಿದ ಮರ. ಡಿಕೆಶಿ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಗಿಸುತ್ತಾರೆ’ ಎಂದು ಟೀಕಿಸಿದರು.

‘ಹಿಂದೊಮ್ಮೆ ಗೋವಾದ ಚುನಾವಣೆ ಪ್ರಚಾರ ಭಾಷಣದಲ್ಲಿ ಸೋನಿಯಾಗಾಂಧಿ ಅವರು ಮಹಾದಾಯಿ ನೀರನ್ನು ಕರ್ನಾಟಕಕ್ಕೆ ಕೊಡಲ್ಲ ಎಂದು ಹೇಳಿದ್ದರು. ಅವರು ಹೇಳಿರಲಿಲ್ಲ ಎಂದು ಕಾಂಗ್ರೆಸ್‌ನವರು ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ. ಮಹದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಸ್ವಾರ್ಥಕ್ಕಾಗಿ ಏನು ಬೇಕಾದರೂ ಹೇಳುತ್ತಾರೆ’ ಎಂದು ಕಟಕಿಯಾಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ನಳಿನ್‌ ಕುಮಾರ್‌ ಕಟೀಲ್‌ ಅವರು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ತಲೆಹರಟೆ ಮಾತನಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದ್ದಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.