ತುಮರಿ: ಇಲ್ಲಿನ ಕರೂರು ಹೋಬಳಿಯ ಕುದರೂರು ಗ್ರಾಮದ ಬಿಚಗೋಡು ಬಳಿ ಗುಡ್ಡ ಕುಸಿದು ಹಾನಿಗೀಡಾದ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಭಾರಿ ಮಳೆಗೆ ಬಿಚಗೋಡು ಮಜರೆಯಲ್ಲಿ ಗುರುವಾರ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ, ಹಾನಿ ಹಾಗೂ ಗುಡ್ಡ ಕುಸಿದ ಬಗ್ಗೆ ಗ್ರಾಮಸ್ಥರಿಂದ ವಿವರ ಪಡೆದರು. ಗುಡ್ಡ ಕುಸಿತದಿಂದ 10 ಎಕರೆ ಜಮೀನು ಜಲವೃತವಾಗಿ, ಬೆಳೆ ಹಾನಿಯಾಗಿದೆ. ಹೀಗಾಗಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಹಳ್ಳದ ದಿಕ್ಕು ಬದಲಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಿಂದ ಪರಿಹಾರ ನೀಡಲು ವಸ್ತುಸ್ಥಿತಿ ವರದಿಯನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಲಾಗುವುದು ಎಂದು ಗ್ರಾಮ ಆಡಳಿತ ಅಧಿಕಾರಿ ಹುಸೇನ್ ಕಟ್ಟಿಮನಿ ತಿಳಿಸಿದರು.
ಕುದರೂರು ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ಪಟ್ಟಣ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿ ಹುಸೇನ್ ಕಟ್ಟಿಮನಿ, ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ.ಟಿ. ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.