ADVERTISEMENT

ಸದಸ್ಯರ ಮಾತು ಕೇಳದ ಅಧಿಕಾರಿಗಳು

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:27 IST
Last Updated 14 ಮಾರ್ಚ್ 2023, 4:27 IST
ಸಾಗರದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸಾಗರದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.   

ಸಾಗರ: ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ನಗರಸಭಾ ಸದಸ್ಯರ ಮಾತಿಗೆ ಅಧಿಕಾರಿಗಳು ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿ 26 ಹಾಗೂ 31ನೇ ವಾರ್ಡ್ ಸದಸ್ಯರು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

‘ತ್ಯಾಜ್ಯ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕಸ ಒಯ್ಯುವ ವಾಹನ ಬರುತ್ತಿಲ್ಲ. ಆದರೆ ಮೂರನೇ ವ್ಯಕ್ತಿಗಳು ಕರೆ ಮಾಡಿದರೆ ತಕ್ಷಣ ವಾಹನ ಕಳುಹಿಸುತ್ತಾರೆ. ಹಾಗಾದರೆ ಸದಸ್ಯರ ಮಾತಿಗೆ ಬೆಲೆ ಇಲ್ಲವೆ’ ಎಂದು ವಿರೋಧ ಪಕ್ಷದ ಸದಸ್ಯೆ ಸಬೀನಾ ತನ್ವೀರ್ ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡ್‌ನಲ್ಲಿ ರಾಶಿಯಾಗಿ ಬಿದ್ದಿರುವ ಕಸವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವುದನ್ನು ಸಭೆಯಲ್ಲಿ ಪ್ರದರ್ಶಿಸಿದ ಸದಸ್ಯೆ ಶಾಹಿನಾಭಾನು, ‘ಕೇವಲ ಕಸದ ವಿಷಯಕ್ಕೆ ನಾವು ಜನರ ಎದುರು ತಲೆ ಎತ್ತಿ ತಿರುಗಲಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ನಡೆಸುವ ಕ್ರಮ ಇದೇನಾ’ ಎಂದು ಅಧ್ಯಕ್ಷರ ಸ್ಥಾನದ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಇಬ್ಬರು ಸದಸ್ಯರನ್ನು ಬೆಂಬಲಿಸಿ ವಿರೋಧ ಪಕ್ಷದ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಮಧುಮಾಲತಿ, ಎನ್.ಲಲಿತಮ್ಮ, ‘ಸದಸ್ಯರಿಗೆ ಅಗೌರವ ತೋರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸದಸ್ಯರಿಗೆ ಅಗೌರವ ತರುವುದನ್ನು ಯಾವುದೇ ಕಾರಣದಿಂದಲೂ ಸಹಿಸಲು ಸಾಧ್ಯವಿಲ್ಲ. ಯಾವ ವಾರ್ಡ್‌ಗಳಲ್ಲಿ ಸ್ವಚ್ಛತೆಯ ಸಮಸ್ಯೆ ಉಂಟಾಗಿದೆ. ಅದನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷೆ ಮಧುರಾ ಶಿವಾನಂದ್ ಭರವಸೆ ನೀಡಿದರು.

ತುರ್ತು ಕಾಮಗಾರಿ ಕುರಿತು ಸಿದ್ಧಪಡಿಸಿರುವ ಕ್ರಿಯಾಯೋಜನೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ವಾರ್ಡ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದ ಆಡಳಿತ ಪಕ್ಷದ ಸದಸ್ಯರಾದ ಶಂಕರ್ ಅಳ್ವೆಕೋಡಿ, ಹೊಸದಾಗಿ ಕ್ರಿಯಾ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.

ಬಿಎಚ್ ರಸ್ತೆಯ ತಾಯಿ-ಮಗು ಆಸ್ಪತ್ರೆಯ ಬಳಿ ಫುಡ್‌ಕೋರ್ಟ್‌ ನಿರ್ಮಿಸಲು ತೀರ್ಮಾನಿಸಲಾಗಿದೆ. ಆದರೆ ಫುಡ್‌ಕೋರ್ಟ್‌ ನಿರ್ಮಿಸುವಾಗ ಅದರ ನಿರ್ಮಾಣ ವೈಜ್ಞಾನಿಕವಾಗಿ ಇರಬೇಕು. ಇಲ್ಲದಿದ್ದಲ್ಲಿ ಈಗಾಗಲೇ ನಗರಸಭೆಯ ಹಲವು ಕಟ್ಟಡ ನಿರುಪಯುಕ್ತವಾದಂತೆ ಅದುಕೂಡ ವ್ಯರ್ಥವಾಗುವ ಅಪಾಯವಿದೆ ಎಂದು ಶಂಕರ್ ಅಳ್ವೆಕೋಡಿ ಎಚ್ಚರಿಸಿದರು.

ನಗರದ ನಾಲ್ಕೂ ದಿಕ್ಕುಗಳಲ್ಲೂ ಫುಡ್‌ಕೋರ್ಟ್ ನಿರ್ಮಿಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು. ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಪೌರಾಯುಕ್ತ ಸಿ.ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.